ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮಕ್ಕಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಇಂದಿನಿಂದ ‘ಪಲ್ಸ್ ಪೋಲಿಯೋ’ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುಟಾಣಿ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಹಾಕುವ ಮೂಲಕ ಈ ಬೃಹತ್ ಅಭಿಯಾನವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ವೇಳೆ ಮಕ್ಕಳೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತ ಡಿ.ಕೆ. ಶಿವಕುಮಾರ್, ಲಸಿಕೆ ಹಾಕುವ ಮುನ್ನ ಮಕ್ಕಳನ್ನು ಮುದ್ದಾಡಿ ಸಮಾಧಾನಪಡಿಸಿದರು. ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ ಪ್ರೀತಿಯಿಂದ ಚಾಕೊಲೇಟ್ ಮತ್ತು ಸಿಹಿ ತಿನಿಸುಗಳನ್ನು ವಿತರಿಸಿ ಅವರ ಮೊಗದಲ್ಲಿ ನಗು ಮೂಡಿಸಿದರು.
ಇತ್ತ ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೊಮ್ಮಗಳಿಗೂ ಪೋಲಿಯೋ ಹನಿಗಳನ್ನು ಹಾಕಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ರಾಜ್ಯಾದ್ಯಂತ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ಸರ್ಕಾರ ಮನವಿ ಮಾಡಿದೆ.

