ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ಎಂದರೆ ಕನ್ನಡ ಸಿನಿರಸಿಕರಿಗೆ ಯಾವತ್ತೂ ವಿಶೇಷ. ಇತ್ತೀಚೆಗೆ ‘45’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, ಈ ಸಿನಿಮಾದ ಮೂಲಕ ಶಿವಣ್ಣನ ಅಸಲಿ ಪ್ರತಿಭೆ ಎಲ್ಲರಿಗೂ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ. ‘ಓಂ’ ಚಿತ್ರದ ಉದಾಹರಣೆ ನೆನಪಿಸಿಕೊಂಡ ಉಪ್ಪಿ, ಮತ್ತೆ ಶಿವಣ್ಣ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಅಚ್ಚರಿ ಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘45’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೆಣ್ಣು ವೇಷದಲ್ಲಿನ ಅವರ ಅಭಿನಯ ಗಮನಸೆಳೆಯುತ್ತದೆ. ಆದರೆ ಅದು ಮಾತ್ರವಲ್ಲ, ಈ ಚಿತ್ರದಲ್ಲಿ ಅವರು ಮಾಡಿರುವ ಇನ್ನಷ್ಟು ಅಂಶಗಳು ಸಿನಿಮಾ ನೋಡಿದ ಬಳಿಕವೇ ಜನರಿಗೆ ಅರ್ಥವಾಗುತ್ತದೆ ಎಂದು ಉಪೇಂದ್ರ ಹೇಳಿದ್ದಾರೆ. “ಈ ಚಿತ್ರದಲ್ಲಿ ನಾವು ಎಲ್ಲರೂ ಶಿವಣ್ಣನ ಜೊತೆ ಇದ್ದೇವೆ. ನಿಜವಾದ ಹೈಲೈಟ್ ಅವರೇ” ಎಂಬ ಮಾತುಗಳು ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಚಿತ್ರದ ನಿರ್ಮಾಣಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮೂರು ವರ್ಷಗಳ ಕಾಲ ಶ್ರಮ ಪಟ್ಟಿದ್ದಾರೆ ಎಂದು ಉಪೇಂದ್ರ ಶ್ಲಾಘಿಸಿದ್ದಾರೆ. ದೊಡ್ಡ ಕನಸಿನೊಂದಿಗೆ ರೂಪುಗೊಂಡ ಈ ಚಿತ್ರದಲ್ಲಿ ಶಿವಣ್ಣನ ಪಾತ್ರವೇ ಕಥೆಯ ಹೃದಯವಾಗಿದೆ ಎನ್ನಲಾಗುತ್ತಿದೆ.

