ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಧನಾದ ಐದನೇ ಬ್ಯಾಚಿನಲ್ಲಿ (2021-23) ಮೊದಲ ಸ್ಥಾನಪಡೆದಿರುವ ಮಂಡ್ಯದ ರಿತ್ವಿಜಾ ದೇವೇಗೌಡ, ಪುಣೆಯ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜಿನಲ್ಲಿ (ಎ.ಎಫ್.ಎಂ.ಸಿ) ಎಂಬಿಬಿಎಸ್ಗೆ ಪ್ರವೇಶವನ್ನು ಪಡೆದಿದ್ದಾಳೆ.
ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರತಿವರ್ಷ ಭಾರತದಾದ್ಯಂತ 30 ವಿದ್ಯಾರ್ಥಿನಿಯರನ್ನು ಎಂ.ಬಿ.ಬಿ.ಎಸ್. ಕೋರ್ಸ್ಗೆ ಆಯ್ಕೆಮಾಡಲಾಗುತ್ತದೆ. ಈ ಬಾರಿ 300 ವಿದ್ಯಾರ್ಥಿನಿಯರ ಪೈಕಿ ಅಂತಿಮವಾಗಿ ಆಯ್ಕೆ ಮಾಡಲಾದ 30 ವಿದ್ಯಾರ್ಥಿನಿಯರಲ್ಲಿ ರಿತ್ವಿಜಾ ಕೂಡ ಒಬ್ಬಳಾಗಿದ್ದಾಳೆ.
ರೈತಾಪಿ ಕುಟುಂಬದಿಂದ ಬಂದಿರುವ ರಿತ್ವಿಜಾ ಎ.ಎಫ್.ಎಂ.ಸಿ.ಗೆ ಈ ಬಾರಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಹಾಗೂ ಸಾಧನಾ ಯೋಜನೆಯಿಂದ ಮೊದಲ ವಿದ್ಯಾರ್ಥಿನಿಯಾಗಿದ್ದಾಳೆ.
ನೀಟ್ ಪರೀಕ್ಷೆಯಲ್ಲಿ ಇವರಿಗೆ 720ರಲ್ಲಿ 670 ಅಂಕಗಳು ಬಂದಿರುತ್ತವೆ.
ಸಾಧನಾ ಇದು ರಾಷ್ಟ್ರೋತ್ಥಾನ ಪರಿಷತ್ತಿನ ಅಪೂರ್ವ ಯೋಜನೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಚಿಂತನೆಯನ್ನು ಸದಾ ಆದ್ಯತೆಯಲ್ಲಿಟ್ಟು, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್ ಈ ಸಾಧನಾ ಎಂಬ ಯೋಜನೆಯನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದೆ. ಈ ಯೋಜನೆಯಲ್ಲಿ ಆರ್ಥಿಕ ಅನನುಕೂಲತೆ ಹೊಂದಿರುವ, ಗ್ರಾಮೀಣ ಪ್ರದೇಶದ ಹಾಗೂ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಇಚ್ಛೆ ಹೊಂದಿರುವ ಪ್ರತಿಭಾವಂತ ಹೆಣ್ಣುಮಕ್ಕಳನ್ನು ಹಲವು ಹಂತಗಳ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆ ಹೆಣ್ಣು ಮಕ್ಕಳಿಗೆ ಎರಡು ವರ್ಷ ಪದವಿಪೂರ್ವ ಶಿಕ್ಷಣ, ವೈದ್ಯಕೀಯ ಪ್ರವೇಶ ಪರೀಕ್ಷೆಗಳ ತರಬೇತಿ (CET, NEET) ಹಾಗೂ ಉಚಿತ ಊಟ-ವಸತಿಗಳ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
2017ರಿಂದ ಪ್ರಾರಂಭವಾಗಿರುವ ಸಾಧನಾಗೆ BASE ಸಂಸ್ಥೆಯವರ ಶೈಕ್ಷಣಿಕ ಸಹಕಾರವಿದೆ. ಇಲ್ಲಿಯವರೆಗೆ 4 ಬ್ಯಾಚುಗಳಲ್ಲಿ ಒಟ್ಟು 200 ವಿದ್ಯಾರ್ಥಿನಿಯರು ಈ ಯೋಜನೆಯ ಪ್ರಯೋಜನ ಪಡೆದಿದ್ದು, 54 ಮಂದಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ.