ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣ ಅಕ್ರಮ ವರ್ಗಾವಣೆ ಆರೋಪದಡಿ ಅಮಾನತುಗೊಂಡಿದ್ದಂತಹ ಪಂಚಕುಲ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀರ್ ಪರ್ಮಾರ್ ಅವನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ದೆಹಲಿಯ ಪಕ್ಕದ ಗುರುಗ್ರಾಮದಲ್ಲಿರುವ ಇ.ಡಿ. ಕಚೇರಿಯಲ್ಲಿ ವಿಚಾರಣೆ ನಡೆಸಲಾಯಿತು. ಬಳಿಕ ಸುಧೀರ್ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ತನಿಖೆಗಾಗಿ ಕಸ್ಟಡಿಗೆ ತೆಗೆದುಕೊಂಡಿರುವ ಸುಧೀರ್ ಪರ್ಮಾರ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಸುಧೀರ್ ಅವರನ್ನು ಮೂರನೇ ಬಾರಿಗೆ ವಿಚಾರಣೆಗೆ ಕರೆದಿದ್ದ ಇ.ಡಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಿಂದ ಅನುಮತಿ ಪಡೆದು ಬಂಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ ಪರ್ಮಾರ್ ಅವರ ಸೋದರಳಿಯ ಅಜಯ್ ಪರ್ಮಾರ್, ‘M3M ಗ್ರೂಪ್’ ರಿಯಲ್ ಎಸ್ಟೇಟ್ ಕಂಪನಿಯ ಪ್ರಚಾರಕರಾದ ಬಸಂತ್ ಬನ್ಸಾಲ್ ಮತ್ತು ಅವರ ಮಗ ಪಂಕಜ್ ಬನ್ಸಾಲ್ ಹಾಗೂ ಮತ್ತೊಂದು ರಿಯಲ್ ಎಸ್ಟೇಟ್ ಕಂಪನಿ ‘IREO ಗ್ರೂಪ್’ ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ ಎಂಬುವರನ್ನು ಈಗಾಗಲೇ ಇಡಿ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ನ್ಯಾಯಾಧೀಶ ಸುಧೀರ್ ಪರ್ಮಾರ್ ಅವರನ್ನು ಮೊದಲೇ ಲಂಚ ಪಡೆದ ಆರೋಪದಡಿ ಅಮಾನತು ಮಾಡಲಾಗಿತ್ತು. ಆದರೆ ಇವರ ವಿರುದ್ಧ ಮತ್ತೆ ಹರಿಯಾಣ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ ಕಳೆದ ಏಪ್ರಿಲ್ ತಿಂಗಳಲ್ಲಿ ಎಫ್ಐಆರ್ ದಾಖಲಿಸಿತ್ತು. ಈ ಎಫ್ಐಆರ್ ಪರಿಣಾಮ ಸುಧೀರ್ ಪರ್ಮಾರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶ ಸ್ಥಾನದಿಂದ ಅಮಾನತುಗೊಳಿಸಿತ್ತು.