ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದು ಎಣ್ಣೆ ತಿಂಡಿ. ಹಾಗಂತ ಆರೋಗ್ಯಕ್ಕೆ ಹಾನಿಕಾರಕವಲ್ಲ…ಎಣ್ಣೆ ತಿಂಡಿ ತಿಂದ್ರೆ ಎಲ್ಲಿ ದಪ್ಪ ಆಗ್ತಿನೋ… ಎಲ್ಲಿ ಬೊಜ್ಜು ಬರುತ್ತೋ ಎಂಬ ಚಿಂತೆ ಖಂಡಿತಾ ಬೇಡ. ಇದು ಸ್ಪೆಷಲ್ ರೆಸಿಪಿ. ನೀವೂ ಟ್ರೈ ಮಾಡಿ.
ಕೊತ್ತಂಬರಿ ಸೊಪ್ಪು ಹಾಗೂ ಕಡ್ಲೆ ಹಿಟ್ಟು ಬಳಸಿ ತಯಾರಿಸಿದ ಈ ವಡಾ ಟೇಸ್ಟಿಯಷ್ಟೇ ಅಲ್ಲ ಹೆಲ್ದೀ ಕೂಡ!. ಇದು ತೂಕ ಇಳಿಸೋಕು ಸಹಕಾರಿಯಾಗುತ್ತದೆ ಎಂದರೆ ಅಚ್ಚರಿಯಲ್ಲವೇ!
ಬೆಳಗ್ಗೆ ಅದೇ ದೋಸೆ, ಅದೇ ಇಡ್ಲಿ, ಅದೇ ಚಿತ್ರಾನ್ನ, ಅದೇ ರೈಸ್ ಐಟಂ ಅಂತ ರಾಗ ಎಳೆಯೋ ಮಂದಿ ಸಾಕಷ್ಟು ಇದ್ದಾರೆ. ಅಂತಹವರಿಗೆ ಇದೊಂದು ಡಿಫರೆಂಟ್ ಟೇಸ್ಟ್ ಕೊಡಬಲ್ಲದು. ಅಷ್ಟೇ ಅಲ್ಲದೆ ಆರೋಗ್ಯಕ್ಕೂ ಸಹಕಾರಿಯಾಗಿರುತ್ತದೆ. ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಮಹಾರಾಷ್ಟ್ರದಲ್ಲಿ ಇದನ್ನು ಜನತೆ ಇಷ್ಟಪಟ್ಟು ತಿನ್ನುತ್ತಾರೆ. ಮಹಾರಾಷ್ಟ್ರದ ಫೇಮಸ್ ತಿಂಡಿಗಳಲ್ಲಿ ಇದೂ ಒಂದು.
ಬೇಕಾಗಿರುವ ಸಾಮಾಗ್ರಿಗಳು: ಕೊತ್ತಂಬರಿ ಸೊಪ್ಪು 150 ಗ್ರಾಂ, ಕಡ್ಲೆ ಹಿಟ್ಟು 100 ಗ್ರಾಂ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್, ಮೆಣಸಿನ ಪುಡಿ, ಹಸಿಮೆಣಸಿನಕಾಯಿ, ಅರಶಿನ ಪುಡಿ, ಇಂಗು,ರುಚಿಗೆ ತಕ್ಕಷ್ಟು ಉಪ್ಪು, ಸಾಸಿವೆ 2 ಚಮಚ, ಬಿಳಿ ಎಳ್ಳು ಅರ್ಧ ಚಮಚ, ಮೊಸರು, ನೀರು, ಕರಿಯಲು ಎಣ್ಣೆ.
ಹೀಗೆ ಮಾಡಿ: ಮೊದಲು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಬಟ್ಟೆಯಲ್ಲಿ ನೀರು ತೆಗೆಯಿರಿ. ನಂತರ ಸಣ್ಣದಾಗಿ ಹೆಚ್ಚಿ ಪ್ರತ್ಯೇಕ ಪಾತ್ರೆಯಲ್ಲಿಡಿ. ಅದೇ ಪಾತ್ರೆಗೆ ಕಡ್ಲೆ ಹಿಟ್ಟನ್ನು ಸೇರಿಸಿ. ಮೊಸರು ಮೆಣಸಿನ ಪುಡಿ, ಅರಶಿನ ಪುಡಿ, ಸಣ್ಣದಾಗಿ ಕೊಚ್ಚಿದ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇಂಗನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ನೀರನ್ನು ಸೇರಿಸಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ತಂದಿಟ್ಟುಕೊಳ್ಳಿ. ಅಗಲವಾದ ಬಟ್ಟಲಿನಲ್ಲಿ ಸವರಿ ಅದನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿ. ಬೆಂದ ಬಳಿಕ ಹೊರ ತೆಗೆದು ಸಣ್ಣ ಗಾತ್ರದಲ್ಲಿ ಕತ್ತರಿಸಿಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಎಳ್ಳು ಸೇರಿಸಿ ಪರಿಮಳ ಬರುವ ತನಕ ಫ್ರೈಮಾಡಿ. ಹಬೆಯಲ್ಲಿ ಬೇಯಿಸಿ ಕತ್ತರಿಸಿದ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಿಸಿ ಬಿಸಿಯಿರುವಾಗಲೇ ಸರ್ವ್ ಮಾಡಿ. ಇದು ಆರೋಗ್ಯಕ್ಕೂ ಉತ್ತಮ. ರುಚಿಯೂ ಚೆನ್ನಾಗಿರುತ್ತದೆ.