ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸುದೀಪ್ ಹಾಗು ನಿರ್ಮಾಪಕ ಕುಮಾರ್ ನಡುವಿನ ಗುದ್ದಾಟ ಸದ್ಯ ಕೋರ್ಟ್ ನಲ್ಲಿದ್ದು, ನಿನ್ನೆಯಷ್ಟೇ ಸುದೀಪ್ ಈ ವಿಚಾರವಾಗಿ ಕೋರ್ಟಿಗೆ ಹಾಜರಾಗಿದ್ದರು.ಈ ವೇಳೆಸುದೀಪ್ ಅವರ ಹೇಳಿಕೆಯನ್ನು ಆಲಿಸಿದ್ದ 13ನೇ ಎಸಿಎಂಎಂ ಕೋರ್ಟನ ನ್ಯಾ.ವೆಂಕಣ್ಣ ಬಸಪ್ಪ ಹೊಸಮನಿ ಅವರು ಇವತ್ತಿಗೆತೀರ್ಪು ಕಾಯ್ದಿರಿಸಿದ್ದರು. ಇದೀಗ ತೀರ್ಪು ಪ್ರಕಟವಾಗಿದ್ದು, ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರವಾಗಿದೆ. ಜೊತೆಗೆ ನಿರ್ಮಾಪಕರಾದ ಎಂ.ಎನ್.ಕುಮಾರ್ ಹಾಗೂ ಸುರೇಶ್ಗೆ ಸಮನ್ಸ್ ಜಾರಿಯಾಗಿದೆ.
ನಿರ್ಮಾಪಕ ಎಂ.ಎನ್. ಕುಮಾರ್ (M.n Kumar) ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಹಾಜರಾಗಿ ನಟ ಸುದೀಪ್ (Sudeep) ತಮ್ಮ ಹೇಳಿಕೆಯನ್ನು ನಿನ್ನೆ ದಾಖಲಿಸಿದ್ದರು. ಹಲವು ಫೋಟೋಗಳೊಂದಿಗೆ ಕೋರ್ಟ್ ಮುಂದೆ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.
ಸುದೀಪ್ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.