ಹೊಸದಿಗಂತ ವರದಿ, ಶ್ರೀರಂಗಪಟ್ಟಣ :
ಹೃದಯಾಘಾತದಿಂದ ಮೃತಪಟ್ಟ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಸ್ಥಿ ವಿಸರ್ಜನೆ ಕಾರ್ಯಕ್ರಮ ತಾಲೂಕಿನ ಪಶ್ಚಿಮವಾಹಿನಿ ಬಳಿ ನಡೆಯಿತು.
ಪುತ್ರ ಶೌರ್ಯ ಅಸ್ಥಿ ವಿಸರ್ಜನೆಯ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ಅಸ್ಥಿ ವಿಸರ್ಜನೆ ಬಳಿಕ ಸದ್ಗತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ವೈದಿಕ ರಮೇಶ್ ಶರ್ಮಾ ನೇತೃತ್ವದಲ್ಲಿ ಅಸ್ಥಿ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಪಶ್ಚಿಮವಾಹಿನಿಯಲ್ಲಿ ಪುತ್ರ ಶೌರ್ಯನಿಗೆ ಮುಡಿಕೊಡಿಸಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿದ ಬಳಿಕ ನಕ್ಷತ್ರ ಹೋಮ, ಅಸ್ಥಿ ನಾರಾಯಣ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಪೂಜಾ ಕಾರ್ಯದಲ್ಲಿ ಪುತ್ರನೊಂದಿಗೆ ವಿಜಯ್ ರಾಘವೇಂದ್ರ ಪಾಲ್ಗೊಂಡಿದ್ದರು. ಬಳಿಕ ಕಾವೇರಿ ನದಿಯ ಸ್ನಾನಘಟ್ಟದ ಬಳಿ ಅಸ್ಥಿ ವಿಸರ್ಜನೆ ಮಾಡಿಸಲಾಯಿತು.
ಅಸ್ಥಿ ವಿಸರ್ಜನೆ ಕಾರ್ಯಕ್ರಮದಲ್ಲಿ ಸ್ಪಂದನಾ ಪತಿ ವಿಜಯ್ ರಾಘವೇಂದ್ರ, ಪುತ್ರ ಶೌರ್ಯ, ಮೈದುನ ಶ್ರೀಮುರುಳಿ, ಮಾವ ಚಿನ್ನೇಗೌಡ, ಸ್ಪಂದನಾ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್ ಭಾಗಿಯಾಗಿದ್ದರು. ಅಸ್ಥಿ ತುಂಬಿದ ಕುಡಿಕೆ ಹಿಡಿದು ದುಃಖದಲ್ಲೇ ಆಗಮಿಸಿದ ವಿಜಯ್ ರಾಘವೇಂದ್ರ ಅಸ್ಥಿ ವಿಸರ್ಜನೆಯಲ್ಲಿ ಪುತ್ರನಿಗೆ ನೆರವಾದರು.
ಅಸ್ಥಿ ವಿಸರ್ಜನೆ ಬಳಿಕ ಪಿಂಡ ಪ್ರದಾನ ಮಾಡುವುದರೊಂದಿಗೆ ಸ್ಪಂದನ ಅಸ್ಥಿ ವಿಸರ್ಜನೆ ಕಾರ್ಯ ಮುಕ್ತಾಯಗೊಂಡಿತು. ಅಸ್ಥಿ ವಿಸರ್ಜನೆ ಮಾಡಿದ ನಂತರ ಕಾವೇರಿ ನದಿಯಲ್ಲಿ ಶೌರ್ಯ, ವಿಜಯ್ ರಾಘವೇಂದ್ರ, ಚಿನ್ನೇಗೌಡರು ಸ್ನಾನ ಮಾಡಿದರು. ಬಳಿಕ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು.