ಹೊಸ ದಿಗಂತ ವರದಿ, ತುಮಕೂರು:
ಸರ್ಕಾರದ ಎಲ್ಲಾ ಯೋಜನೆಗಳನ್ನು ಅಧಿಕಾರಿಗಳು ಸಕಾಲಕ್ಕೆ ಅನುಷ್ಠಾನ ಮಾಡಿ ಎಲ್ಲಾ ವರ್ಗದ ಅರ್ಹ ಫಲಾನುಭವಿಗಳಿಗೆ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದರು.
ತಿಪಟೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿಂದು ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಹೊಸ ಸರ್ಕಾರ ರಚನೆಯಾದ ನಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ನಂತರ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಚುನಾವಣೆಗೆ ಮುನ್ನ ನಮ್ಮ ಪಕ್ಷ 5 ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಅವುಗಳನ್ನು ಹಂತ ಹಂತವಾಗಿ ಅನುಷ್ಟಾನ ಮಾಡಲಾಗಿರುವ ಕಾರ್ಯಕ್ರಮಗಳನ್ನು ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಮೊದಲಿಗೆ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ತಾಲ್ಲೂಕಿನಲ್ಲಿ 43ಕಿ. ಮೀ ಉದ್ದ ಎತ್ತಿನಹೊಳೆ ಯೋಜನೆ ಕಾಮಗಾರಿ ಹಾದು ಹೋಗುತ್ತದೆ. ಈ ಯೋಜನೆಗೆ 374ಕೋಟಿ ಹಣ ಮೀಸಲಿಡಲಾಗಿದೆ. 43 ಕಿ. ಮೀ ಪೈಕಿ 16ಕಿ. ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ 27 ಕಿ. ಮೀ. ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಜೆ.ಜೆ.ಎಂ. ಯೋಜನೆಯಡಿ ಮನೆ ಮನೆಗೆ ನಳ ದ ಮೂಲಕ ಕುಡಿಯುವ ನೀರನ್ನು ನೀಡುವ ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಅದರಲ್ಲಿ ಕೆಲವು ಗುಣಮಟ್ಟವಾಗಿ ಕಾಮಗಾರಿಗಳು ನಿರ್ಮಾಣವಾಗಿಲ್ಲ ಎಂದರಲ್ಲದೆ, ಕಳಪೆ ಗುಣಮಟ್ಟದ ಕಾಮಗಾರಿಗಳು ನಡೆಯದಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಅವಧಿಯೊಳಗೆ ಮುಗಿಸಬೇಕು ಹಾಗೂ ರಸ್ತೆ ತಿರುವು ಕಡೆ, ಅಪಘಾತ ವಲಯಗಳನ್ನು ಗುರುತಿಸಿರುವ ಕಡೆ ಸೂಚನಾ ಫಲಕಗಳನ್ನು ಅಳವಡಿಸಬೇಕು.ನಗರದ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುತ್ತವೆ. ಆದ ಕಾರಣ ಸ್ಕೈ ವಾಕ್ ಅನ್ನು ನಿರ್ಮಾಣ ಮಾಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ d ಯೋಜನಾ ನಿರ್ದೇಶಕರಾದ ಅನುಪ್ ಶರ್ಮಾ ಅವರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 48,658 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಭೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ತಾಲ್ಲೂಕಿನ 68113 ಕುಟುಂಬಗಳು ಈ ಯೋಜನೆಗೆ ಒಳಪಡುತ್ತವೆ. ಇದರ ಪೈಕಿ 59099 ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬೆಸ್ಕಾಂ AEE ಸಭೆಗೆ ಮಾಹಿತಿ ನೀಡಿದರು.
ಬಿಇಒ ಕಚೇರಿ ನೂತನ ಕಟ್ಟಡ ನಿರ್ಮಾಣ ವಾಗುವವರೆಗೆ ಕಚೇರಿಯನ್ನು ಗುರುಭವನದಲ್ಲಿ ಸ್ಥಳಾಂತರಿಸಿ ಎಂದು ತಿಳಿಸಿದರು.
ನಗರದ ಹೇಮಾವತಿ ನಾಲಾ ಇಲಾಖೆಯ ವ್ಯಾಪ್ತಿಯಲ್ಲಿರುವ 4ಎಕರೆ ಜಾಗವನ್ನು, ಅದರಲ್ಲಿ ಎರಡು ಎಕರೆ ಭೂಮಿಯನ್ನು ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆ ನಿರ್ಮಾಣ ಮಾಡಲು ನೀಡುವಂತೆ ಇಲಾಖೆಯ ಅಧಿಕಾರಿಗೆ ಒಂದು ಮನವಿಯನ್ನು ಸಲ್ಲಿಸಿ ಎಂದು DHO ಮತ್ತು THO ಅವರಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮಂಜೂರಾದ ನಿವೇಶನ ಕಾಮಗಾರಿಗಳ ಪ್ರಗತಿಯು ಕುಂಠಿತವಾಗಿರುವುದಕ್ಕೆ ಕಾರಣ ತಿಳಿಸಿ ಎಂದು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ಸಭೆಗೆ ಬರುವಾಗ ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆಯ ಹಿಂದಿನ 5ವರ್ಷದ ಪ್ರಗತಿಯ ಅಂಕಿ ಸಂಖ್ಯೆಗಳನ್ನು ತೆಗೆದು ಕೊಂಡು ಬರಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಸಕ ಷಡಕ್ಷರಿ, ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, CEO ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ ವಾಡ್, ಅಪಾರ ಜಿಲ್ಲಾಧಿಕಾರಿ ಶಿವನಾಂದ ಬಿ ಕರಾಳೆ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.