ಹೊಸದಿಗಂತ ಡಿಜಿಟಲ್ ಡೆಸ್ಕ್:
77ನೇ ಸ್ವಾತಂತ್ರ್ಯ ದಿನಾಚರಣೆಗೆ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನ ಸಜ್ಜುಗೊಂಡಿದೆ. ಬೆಳಗ್ಗೆ 9ಗಂಟೆಗೆ ಮಾನ್ಯ ಮುಂಕಯಮಂತ್ರಿಗಳು ಸಿದ್ದರಾಮಯ್ಯನವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಈ ವರ್ಷ ಕೊರೊನಾ ಇಲ್ಲದ ಕಾರಣ ಕಾರ್ಯಕ್ರಮಕ್ಕೆ 12 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆಯಿದೆ.
ಸ್ವಾತಂತ್ರ್ಯದಿನಾಚರಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿವೆ. ಇಂದು ಬೆಳಗ್ಗೆ 9 ಗಂಟೆಗೆ ಸಿಂಎ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ, ಬಳಿಕ ತೆರೆದ ಜೀಪಿನಲ್ಲಿ ಪರೇಡ್ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಪೊಲೀಸ್ ಸಿಬ್ಬಂದಿ, ಸೇರಿದಂತೆ ತುಕಡಿಗಳ ಗೌರವ ವಂದನೆ ಸ್ವೀಕರಿಸಲಿದ್ದಾರೆ. ನಗರದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬಿಗಿ ಭದ್ರತೆ
ಸ್ವತಂತ್ರ್ಯೋತ್ಸವಕ್ಕಾಗಿ ಮೈದಾನದ ಸುತ್ತ 1,786 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 9 ಡಿಸಿಪಿ, 10 ಕೆಎಸ್‌ಆರ್‌ಪಿ ತುಕಡಿ, ಕಿರಿಯ ಅಧಿಕಾರಿಗಳೂ ಸೇರಿದ್ದಾರೆ. ಮೈದಾನ 100 ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿದೆ. 2 ಅಗ್ನಿ ಶಾಮಕ ವಾಹನ, ಎರಡು ಆಂಬ್ಯುಲೆನ್ಸ್, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ-ಸ್ವಾಟ್, 1 ಆರ್‌ಐವಿ ತಂಡಗಳನ್ನು ಸಹ ನಿಯೋಜನೆ ಮಾಡಲಾಗಿದೆ.
ಪರ್ಸ್ ಬಿಟ್ಟು ಇತರೆ ವಸ್ತುಗಳ ನಿಷೇಧ
ಕಾರ್ಯಕ್ರಮಕ್ಕೆ ಹಾಜರಾಗುವವರ ತಪಾಸಣೆ ಬಿಗಿಯಾಗಿದೆ. ಪರ್ಸ್ ಬಿಟ್ಟು ಉಳಿದಂತೆ ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು, ಚಾಕು-ಚೂರಿ, ಹರಿತವಾದ ವಸ್ತುಗಳು, ಮದ್ಯದ ಬಾಟಲಿ, ಮಾದಕ ವಸ್ತು, ಪಟಾಕಿ, ನೀರಿನ ಬಾಟಲಿಗಳನ್ನು ನಿಷೇಧಿಸಲಾಗಿದೆ.