ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರದಿಂದ ಸುರಿದ ಭಾರೀ ಮಳೆಗೆ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಸೇತುವೆ ಕುಸಿದಿದೆ. ಇದರಿಂದ ಕೇದಾರನಾಥ-ಮದ್ಮಹೇಶ್ವರ ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, 52 ಪ್ರಯಾಣಿಕರನ್ನು ಹಗ್ಗದ ಸಹಾಯದಿಂದ ರಕ್ಷಿಸಲಾಯಿತು. ಈ ವಾರ ಗುಡ್ಡಗಾಡು-ರಾಜ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ.
ಬುಧವಾರ ರುದ್ರಪ್ರಯಾಗ ಜಿಲ್ಲೆಯ ಬಂಟೋಲಿಯಲ್ಲಿ ಸೇತುವೆ ಕುಸಿದಿದ್ದು, ದೇಗುಲಗಳಿಗೆ ಸಂಪರ್ಕ ಕಲ್ಪಿಸುವ ಮಧು ಗಂಗಾ ನದಿಯ ಮೇಲೆ ನಿರ್ಮಿಸಿರುವ ಕಾಲುಸಂಕವು ಕೂಡ ನಿರಂತರ ಮಳೆಯಿಂದಾಗಿ ಭಾರಿ ಹಾನಿಯಾಗಿದೆ.
ಕೇದಾರನಾಥ ಯಾತ್ರೆಗೆ ತೆರಳಿದ್ದ ಸುಮಾರು 200 ಯಾತ್ರಾರ್ಥಿಗಳು ಕೂಡ ಸ್ಥಳದಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರಲ್ಲಿ ಕೆಲವರು ದಾರಿ ತಪ್ಪಿ ಕಾಣೆಯಾಗಿದ್ದಾರೆ. ಬದರಿನಾಥ, ಕೇದಾರನಾಥ ಮತ್ತು ಗಂಗೋತ್ರಿ ದೇಗುಲಗಳಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಗಳು ಹಾಳಾಗಿವೆ. ಕೇದಾರನಾಥ ಚಾರಣದ ದಾರಿಯಲ್ಲಿ ಲಿಂಚೋಲಿ ಶಿಬಿರದಲ್ಲಿ ಭೂಕುಸಿತ ಸಂಭವಿಸಿ ನಾಲ್ಕು ಅಂಗಡಿಗಳು ಹಾನಿಗೊಳಗಾಗಿವೆ.
ಕೇದಾರನಾಥ-ಮದ್ಮಹೇಶ್ವರ ಯಾತ್ರಾ ಮಾರ್ಗವೂ ಸಂಪೂರ್ಣ ಹಾಳಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಎರಡು ದಿನಗಳ ಕಾಲ ಚಾರ್ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.