ಸೋತಾಗ ಹಿಂಜರಿಕೆ ಬೇಡ ಎಂದಿದ್ದ ಅಟಲ್‌ಜೀ ಮಾತು ಇಂದಿಗೂ ಪ್ರಸ್ತುತ: ಎಂ.ಜಿ.ಮಹೇಶ್

ಹೊಸದಿಗಂತ ವರದಿ ಬೆಂಗಳೂರು:

ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಗೆ ಮುಕುಟಪ್ರಾಯರು ಮತ್ತು ಪಕ್ಷಕ್ಕೊಂದು ಇಮೇಜ್ ನೀಡಿದವರು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ವಿಶ್ಲೇಷಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿಯ ಹಿರಿಯ ನಾಯಕರಾಗಿದ್ದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಟಲ್‍ಜಿ ಅವರು ಸೋತ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭದ್ರಾವತಿಯ ಕಾರ್ಯಕರ್ತರೊಬ್ಬರು ಆಗ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾವು ಸೋತಿದ್ದೇವೆಂದು ಹಿಂಜರಿಕೆ ಬೇಡ ಎಂದು ಅಟಲ್‍ಜಿ ಆಗ ಹೇಳಿದ್ದರು. ಆ ಮಾತುಗಳು ಕರ್ನಾಟಕದ ರಾಜಕಾರಣಕ್ಕೆ ಇಂದಿಗೂ ಪ್ರಸ್ತುತ ಎಂದು ವಿವರಿಸಿದರು.

ಸೋತರೂ ನಾವು ಬೆನ್ನುತಿರುಗಿಸಿ ಹೋಗುವುದಿಲ್ಲ ಎಂದು ಅವರು ನುಡಿದಿದ್ದರು ಎಂದರಲ್ಲದೆ, ದೇಶದ, ಚೆನ್ನಾಗಿರುವ ಧರ್ಮದ ಕಾರ್ಯದಲ್ಲಿ ನಾವೆಲ್ಲರೂ ನಮ್ಮನ್ನು ತೊಡಗಿಸಿಕೊಳ್ಳಬೇಕು. ಅಟಲ್‍ಜಿ ಅವರ ಗುಣಗಳನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಸಣ್ಣ ಮಗುವಿನಂತ ವ್ಯಕ್ತಿತ್ವ, ಪ್ರೀತಿಯ ಗುಣ ಅವರದು. ‘ಹೇ ಭಗವಂತ ನನ್ನನ್ನು ಬಹು ಎತ್ತರಕ್ಕೆ ಬೆಳೆಸದಿರು. ಯಾರ ಕಣ್ಣೀರನ್ನೂ ಒರೆಸದಂಥ ರಾಜಕಾರಣಿ ನಾನಾನುಗುವುದು ಬೇಡ’ ಎಂಬ ಆಶಯವನ್ನು ಅವರು ಸದಾಕಾಲ ಹೊಂದಿದ್ದರು ಎಂದು ನುಡಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ಬಿಜೆಪಿ ಕಾರ್ಯಕರ್ತರು ಸದಾ ತಮ್ಮ ಹೃದಯದಲ್ಲಿ ಭಕ್ತಿಯ ದೀಪದಾರತಿ ಎತ್ತುತ್ತಾರೆ ಎಂದ ಅವರು, ಅಟಲ್‍ಜಿ ಅವರ ಜೊತೆ ಓಡಾಟ ಮಾಡುವ ಅನೇಕ ಅವಕಾಶಗಳು ನನಗೆ ಲಭಿಸಿದ್ದವು ಎಂದು ನೆನಪಿಸಿಕೊಂಡರು. ಅಟಲ್‍ಜಿ ಅವರ ಭಾಷಣವನ್ನೂ ಹತ್ತಾರು ಬಾರಿ ತರ್ಜುಮೆ ಮಾಡುವ ನನಗೆ ಸಿಕ್ಕಿದೆ ಎಂದರು. ಪಕ್ಷದ ಪ್ರಮುಖರು, ಕಾರ್ಯಾಲಯದ ಸಿಬ್ಬಂದಿವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!