ಹೊಸದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಆ. 17ರಂದು ಪಾಡಿ ಶ್ರೀ ಇಗ್ಹುತ್ತಪ್ಪನ ಸನ್ನಿಧಿಯಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲು ಅಖಿಲ ಕೊಡವ ಸಮಾಜ ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು, ಕೊಡಗಿನಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದ್ದು, ಮಳೆಯ ಕೊರತೆಯಿಂದ ಭತ್ತ ಬೆಳೆಯುವ ಪ್ರದೇಶ ಭಾಗಶಃ ಪಾಳು ಬಿದ್ದಿವೆ. ಮಾತ್ರವಲ್ಲ ಕಾಫಿ, ಕರಿಮೆಣಸು, ಏಲಕ್ಕಿಗೂ ಬಿಸಿ ತಟ್ಟಿದೆ. ಇಷ್ಟು ಮಾತ್ರವಲ್ಲದೆ ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಮಾನವ ಕುಲ ಮಾತ್ರವಲ್ಲದೆ ಪ್ರಾಣಿಪಕ್ಷಿಗಳು ಕೂಡಾ ನೀರಿಲ್ಲದೆ ಪರಿತಪಿಸುವ ಸೂಚನೆ ಕಾಣುತ್ತಿದೆ. ಇದನ್ನು ಮನಗಂಡು ಮಳೆ ಬೆಳೆ ದೇವರಾದ ಇಗ್ಗುತಪ್ಪನಲ್ಲಿ ಮೊರೆ ಹೋಗಲು ಅಖಿಲ ಕೊಡವ ಸಮಾಜ ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.
ಆಗಸ್ಟ್ 17ರಂದು ಬೆಳಗ್ಗೆ 10-30 ಗಂಟೆಗೆ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ವಿವಿಧ ಕೊಡವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಕೊಡಗಿನ ಎಲ್ಲಾ ಮೂಲ ನಿವಾಸಿ ಜನಾಂಗಗಳು ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.