ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಲಡಾಖ್ ಪ್ರವಾಸವನ್ನು ಆಗಸ್ಟ್ 25ರವರೆಗೆ ವಿಸ್ತರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಹುಲ್ ತಮ್ಮ ತಂದೆ, ಮಾಜಿ ಪ್ರಧಾನಿ ದಿವಗಂತ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಆಗಸ್ಟ್ 20 ರಂದು ಪ್ಯಾಂಗಾಂಗ್ ಸರೋವರದಲ್ಲಿ ಆಚರಿಸಲಿದ್ದಾರೆ.
ಪ್ರವಾಸದ ಭಾಗವಾಗಿ ರಾಹುಲ್ ಕಾರ್ಗಿಲ್ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿನ ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ
ಲೇಹ್ನಲ್ಲಿ ಫುಟ್ಬಾಲ್ ಪಂದ್ಯವನ್ನೂ ವೀಕ್ಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಕಾಲೇಜು ದಿನಗಳಲ್ಲಿ ಫುಟ್ಬಾಲ್ ಆಟಗಾರರಾಗಿದ್ದರು.
ಆಗಸ್ಟ್ 25 ರಂದು 30 ಸದಸ್ಯರ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ (LAHDC)-ಕಾರ್ಗಿಲ್ ಚುನಾವಣೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 10 ರಂದು ನಡೆಯಲಿರುವ ಕಾರ್ಗಿಲ್ ಕೌನ್ಸಿಲ್ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ.
ಗುರುವಾರ ಲಡಾಖ್ಗೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ಲೇಹ್ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.