ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದಲ್ಲಿ ಭಾರೀ ಚರ್ಚೆಗಳಾಗುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.
ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಿದ್ದೀವಿ, ಆದರೆ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಮೆಚ್ಚಿಸೋದಕ್ಕೆ ನೀರು ಬಿಡುಗಡೆ ಮಾಡಿದ್ದೀವಿ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ರಾಜ್ಯ ಸರ್ಕಾರ ಹೇಳಿದೆ.
ಡಿಎಂಕೆ ಜೊತೆಗಿನ ಮೈತ್ರಿಯನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡಿಗೆ ನೀರು ಬಿಟ್ಟಿಲ್ಲ. ನ್ಯಾಯಾಲಯದ ಆದೇಶವನ್ನು ಗೌರವಿಸಿದ್ದೇವೆ ಅದನ್ನೇ ಪಾಲಿಸಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹಿಂದಿನ ಸರ್ಕಾರಗಳು ಕೂಡ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಪಾಲಿಸಿವೆ, ನಾವು ಕೂಡ ಅದನ್ನೇ ಪಾಲಿಸಿದ್ದೇವೆ ಎಂದಿದ್ದಾರೆ. ಯಾವ ಯಾವ ಸರ್ಕಾರ ಎಷ್ಟು ನೀರು ಬಿಟ್ಟಿದೆ ಎನ್ನುವ ಅಂಕಿ ಅಂಶ ನಮ್ಮ ಬಳಿ ಇದೆ, ಆದರೆ ಈ ವಿಷಯದಲ್ಲಿ ರಾಜಕೀಯ ಮಾಡೋದಕ್ಕೆ ಬಯಸುವುದಿಲ್ಲ ಎಂದಿದ್ದಾರೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ರಾಜಕೀಯ ಮಾಡಲಾಗುತ್ತಿದೆ. ಏಕಪಕ್ಷೀಯ ನಿರ್ಧಾರ ಇದಾಗಿದೆ, ಈ ವಿಚಾರದಲ್ಲಿ ಯಾವ ಸರ್ಕಾರವೂ ಸರ್ವಾಧಿಕಾರಿ ಧೋರಣೆ ತೋರಿಲ್ಲ. ಆದರೆ ಈ ಸರ್ಕಾರ ರೈತರನ್ನು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.