ಹೊಸ ದಿಗಂತ ವರದಿ, ಅಂಕೋಲಾ:
ಟ್ರಾಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಂತ್ರದ ಬಿಡಿ ಭಾಗ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ನೀಲಂಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಹಾವೇರಿ ನಿವಾಸಿಗಳಾದ ದರ್ಶನ ಕೆಂಚಪ್ಪ ಕಂಡೋಜಿ (12) ಕಿರಣ ಹನುಮಂತಪ್ಪ ಮೇಗಲಮನೆ (12) ಗಾಯಗೊಂಡ ವಿದ್ಯಾರ್ಥಿಗಳಾಗಿದ್ದು , ಅಜ್ಜಿಕಟ್ಟಾ ಸರ್ಕಾರಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿಗಳಾದ ಇವರು ತರಗತಿ ಮುಗಿದ ನಂತರ ಹೆದ್ದಾರಿ ಪಕ್ಕದ ಕಚ್ಚಾರಸ್ತೆ ಮೂಲಕ ಬಾಳೇಗುಳಿಯ ವಿದ್ಯಾರ್ಥಿ ವಸತಿನಿಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಭಾರೀ ಗಾತ್ರದ ಸರಕು ತುಂಬಿ ಕುಮಟಾ ಕಡೆ ಸಾಗುತ್ತಿದ್ದ ಎಂ.ಎಚ್ 43 ವೈ 5889 ನೋಂದಣಿ ಸಂಖ್ಯೆಯ ಟ್ರಾಲಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಹಗ್ಗ ತುಂಡಾಗಿ ಅದರಲ್ಲಿದ್ದ ಕಬ್ಬಿಣದ ಚೌಕಟ್ಟುಗಳು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಿದ್ದಿದ್ದು ದರ್ಶನ ಎಂಬಾತನ ಎಡಗಾಲಿಗೆ ಹಾಗೂ ಕಿರಣ ಎಂಬಾತನ ಎಡಕಾಲಿನ ತೊಡೆ ಮತ್ತು ಬಲ ಕೈ ಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಸ್ಥಳೀಯರು ಗಾಯಾಳುಗಳನ್ನು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಕಾರವಾರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಅಂಕೋಲಾ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಮತ್ತು ಸುನೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಟ್ರಾಲಿ ಚಾಲಕ ಮಹಾರಾಷ್ಟ್ರದ ಕೋಲಾಪುರ ನಿವಾಸಿ ವಿಜಯ ಬಲಭೀಮ ಡೊರೊಲೆ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿದೆ.