Monday, December 22, 2025

Parenting | ಶಿಸ್ತು ‘ಟಾರ್ಚರ್’ ಆಗದಿರಲಿ: ಪೋಷಕರ ಅತಿಯಾದ ಕಟ್ಟುನಿಟ್ಟು ಮಕ್ಕಳ ನಗು ಕದಿಯದಿರಲಿ!

ಮಕ್ಕಳು ಅಂದಮೇಲೆ ತುಂಟಾಟ, ಆಟ, ನಗು ಇರಲೇಬೇಕು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರು “ಶಿಸ್ತು” ಎಂಬ ಹೆಸರಿನಲ್ಲಿ ಮಕ್ಕಳ ಸುತ್ತ ಎಂತಹ ಗೋಡೆ ಕಟ್ಟುತ್ತಿದ್ದಾರೆಂದರೆ, ಆ ಗೋಡೆಯೊಳಗೆ ಮಕ್ಕಳ ಮುಗ್ಧತೆ ಉಸಿರುಗಟ್ಟುತ್ತಿದೆ. ಶಿಸ್ತು ಇರಲಿ, ಆದರೆ ಅದು ‘ಟಾರ್ಚರ್’ ಆಗಬಾರದು.

ಪ್ರತಿಯೊಂದರಲ್ಲೂ ಮಗು ನಂಬರ್ ಒನ್ ಆಗಿರಬೇಕು, ಬಟ್ಟೆ ಕೊಳೆಯಾಗಬಾರದು, ಅಕ್ಷರ ಮುತ್ತಿನಂತಿರಬೇಕು ಎಂಬ ಪೋಷಕರ ಅತಿಯಾದ ನಿರೀಕ್ಷೆ ಮಗುವನ್ನು ಯಂತ್ರವನ್ನಾಗಿಸುತ್ತದೆ. ತಪ್ಪು ಮಾಡುವುದು ಕಲಿಕೆಯ ಒಂದು ಭಾಗ ಎಂದು ಪೋಷಕರು ಮರೆತುಬಿಡುತ್ತಾರೆ.

“ಪಕ್ಕದ ಮನೆಯ ಮಗು ನೋಡು ಎಷ್ಟು ಚೆನ್ನಾಗಿ ಓದುತ್ತೆ, ನೀನು ಯಾಕೆ ಹೀಗೆ?” ಎಂಬ ಮಾತು ಮಗುವಿನ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಪ್ರತಿಯೊಂದು ಮಗುವೂ ವಿಶಿಷ್ಟ ಎಂಬ ಸತ್ಯವನ್ನು ಒಪ್ಪಿಕೊಳ್ಳದ ಪೋಷಕರು ಶಿಸ್ತಿನ ಹೆಸರಲ್ಲಿ ಮಗುವಿನ ವ್ಯಕ್ತಿತ್ವವನ್ನೇ ಕೊಲ್ಲುತ್ತಿದ್ದಾರೆ.

ಮಕ್ಕಳಿಗೂ ಒಂದು ಮನಸ್ಸಿದೆ, ಅವರಿಗೂ ಆಸೆಗಳಿವೆ ಎಂಬುದು ಮರೆತು ಕೇವಲ “ಹೀಗೆ ಮಾಡು”, “ಅಲ್ಲಿ ಹೋಗಬೇಡ” ಎಂಬ ಆಜ್ಞೆಗಳನ್ನು ಮಾತ್ರ ನೀಡುವ ಪೋಷಕರು ಮಕ್ಕಳಿಂದ ದೂರವಾಗುತ್ತಾರೆ. ಇದರಿಂದ ಮಕ್ಕಳು ಭಯದಿಂದ ಶಿಸ್ತು ಪಾಲಿಸುತ್ತಾರೆಯೇ ಹೊರತು ಪ್ರೀತಿಯಿಂದಲ್ಲ.

ಶಾಲೆ, ಟ್ಯೂಷನ್, ಹೋಮ್‌ವರ್ಕ್ ಮಧ್ಯೆ ಮಗು ಮಣ್ಣಿನಲ್ಲಿ ಆಡುವುದನ್ನೇ ಮರೆತುಬಿಟ್ಟಿದೆ. ಆಟದ ಮೂಲಕ ಸಿಗುವ ಶಿಸ್ತು ಮತ್ತು ಪಾಠ ಯಾವುದೂ ನಾಲ್ಕು ಗೋಡೆಗಳ ಮಧ್ಯೆ ಸಿಗುವುದಿಲ್ಲ.

ನೆನಪಿಡಿ.. ಮಕ್ಕಳನ್ನು ತಿದ್ದುವಾಗ ಸಿಗುವ ಸಣ್ಣ ತಪ್ಪುಗಳಿಗಿಂತ, ಅವರು ಮಾಡುವ ಸಣ್ಣ ಸಾಧನೆಗಳನ್ನು ಹೆಚ್ಚು ಪ್ರಶಂಸಿಸಿ. ಆಗ ಶಿಸ್ತು ಎಂಬುದು ಅವರಿಗೆ ಹೊರೆಯಾಗದೆ ಹವ್ಯಾಸವಾಗುತ್ತದೆ.

error: Content is protected !!