ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ‘ಗದರ್ 2’ . ಬಾಕ್ಸ್ ಆಫೀಸ್ನಲ್ಲಿಈಗಾಗಲೇ ಮೋಡಿಮಾಡುತ್ತಿದ್ದು, ದೊಡ್ಡ ಮೊತ್ತದ ಕಲೆಕ್ಷನ್ ಮಾಡುತ್ತಿದೆ.
ಬಿಡುಗಡೆಯಾಗಿ 11 ದಿನ ಕಳೆದರೂ ಈ ಚಿತ್ರದ ಆರ್ಭಟ ಕಡಿಮೆ ಆಗಿಲ್ಲ. ಬಾಲಿವುಡ್ನ ಖ್ಯಾತ ನಟ ಸನ್ನಿ ಡಿಯೋಲ್ (Sunny Deol) ಅವರು ಈ ಸಿನಿಮಾದ ಗೆಲುವಿನಿಂದ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ.
ಶೀಘ್ರದಲ್ಲೇ ‘ಗದರ್ 2’ ಸಿನಿಮಾ 400 ಕೋಟಿ ರೂಪಾಯಿ ಗಡಿ ಮುಟ್ಟಲಿದೆ. ಸನ್ನಿ ಡಿಯೋಲ್ ಮತ್ತು ಅಮೀಷಾ ಪಟೇಲ್ (Ameesha Patel) ಅವರು ಸದ್ಯಕ್ಕೆ ಸೆಲೆಬ್ರೇಷನ್ ಮೂಡ್ನಲ್ಲಿ ಇದ್ದಾರೆ. ಚಿತ್ರತಂಡದವರೆಲ್ಲರೂ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
‘ಗದರ್ 2’ ಸಿನಿಮಾಗೆ ಅನಿಲ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್ ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್ ನಟಿಸಿದ್ದಾರೆ. ಅಮೀಷಾ ಪಟೇಲ್ ಕೂಡ ಬಹಳ ವರ್ಷದ ಬಳಿಕ ಈ ರೀತಿಯ ಸಕ್ಸಸ್ ಪಡೆದಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಆ ಕಾರಣದಿಂದ ಇತ್ತೀಚೆಗೆ ದುಬೈಗೆ ತೆರಳಿ ಸನ್ನಿ ಡಿಯೋಲ್ ಮತ್ತು ಅಮೀಷಾ ಪಟೇಲ್ ಅವರು ಸಂಭ್ರಮಿಸಿದ್ದರು.
ಆಗಸ್ಟ್ 11ರಿಂದ ಆಗಸ್ಟ್ 20ರವರೆಗೆ ‘ಗದರ್ 2’ ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್ 375 ಕೋಟಿ ರೂಪಾಯಿ. ಈ ಸಿನಿಮಾ ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. 400 ಕೋಟಿ ರೂಪಾಯಿ ಗಡಿ ಮುಟ್ಟಲು ಇನ್ನು 25 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಮಂಗಳವಾರದ (ಆಗಸ್ಟ್ 22) ವೇಳೆಗೆ ಈ ಸಿನಿಮಾ 400 ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ನಿರೀಕ್ಷಿಸಲಾಗಿದೆ.