ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ತೆಹ್ರಿ ಜಿಲ್ಲೆಯ ಚಂಬಾದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, (Land Slide) ನಾಲ್ಕು ತಿಂಗಳ ಮಗುವೊಂದು ಮಣ್ಣಿನಡಿ ಸಿಲುಕಿ ಮೃತಪಟ್ಟಿದೆ. ಇದರ ಜತೆಗೆ ಇಬ್ಬರು ಮಹಿಳೆಯರೂ ಮೃತಪಟ್ಟಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಹೂತುಹೋದ ಕಾರಿನಲ್ಲಿ ಅವರ ಶವಗಳು ಪತ್ತೆಯಾಗಿವೆ ಎಂದು ತೆಹ್ರಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ.
ಚಂಬಾ ಪೊಲೀಸ್ ಠಾಣೆಯ ಬಳಿಯ ಟ್ಯಾಕ್ಸಿ ಸ್ಟ್ಯಾಂಡ್ ಮೇಲೆ ಭೂಕುಸಿತ ಸಂಭವಿಸಿತ್ತು. ಇನ್ನೂ ಹಲವಾರು ವಾಹನಗಳ ಮಣ್ಣಿನಡಿ ಸಿಕ್ಕಿಬಿದ್ದಿರಬಹುದು ಎಂದು ಅಂದಾಜಿಸಲಾಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಮೃತರನ್ನು ಪೂನಂ ಖಂಡೂರಿ, ಅವರ ನಾಲ್ಕು ತಿಂಗಳ ಮಗ ಮತ್ತು ಅವರ ಅತ್ತಿಗೆ ಸರಸ್ವತಿ ದೇವಿ ಎಂದು ಗುರುತಿಸಲಾಗಿದೆ.
ಭೂಕುಸಿತ ಉಂಟಾದ ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ, ಲೋಕೋಪಯೋಗಿ ಇಲಾಖೆ, ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಸ್ಥಳದಲ್ಲಿ ಆರು ಮಣ್ಣು ಸಾಗಿಸುವ ಯಂತ್ರಗಳನ್ನು ನಿಯೋಜಿಸಲಾಗಿದೆ.
ಈ ಪ್ರದೇಶಕ್ಕೆ ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲು ವಿದ್ಯುತ್ ಇಲಾಖೆ ಸಹ ಕೆಲಸ ಮಾಡುತ್ತಿದೆ ಎಂದು ತೆಹ್ರಿ ವಿಪತ್ತು ನಿರ್ವಹಣಾ ಅಧಿಕಾರಿ ಬ್ರಿಜೇಶ್ ಭಟ್ ಹೇಳಿದ್ದಾರೆ.