ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿದಿನ ಮೀನು ತಿನ್ನಿ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಕಣ್ಣುಗಳಂತೆ ಕಣ್ಣುಗಳನ್ನು ಪಡೆಯಿರಿ ಎಂದು ಮಹಾರಾಷ್ಟ್ರದ ಸಚಿವರೊಬ್ಬರ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,ಈ ಹೇಳಿಕೆ ಬಗ್ಗೆ ವಿವರಣೆ ನೀಡಲು ಮಹಿಳಾ ಆಯೋಗ ನೋಟಿಸ್ ನೀಡಿದೆ.
ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಂಕರ್ ಅವರು ರಾಜ್ಯ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗವಿತ್ ಅವರಿಗೆ ನೋಟಿಸ್ ನೀಡಿದೆ. ಅಲ್ಲದೆ, ಗವಿತ್ ಅವರ ಹೇಳಿಕೆ ಬಗ್ಗೆ ಮೂರು ದಿನಗಳಲ್ಲಿ ವಿವರಣೆಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ನೀವು ಮಹಿಳೆಯರ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ವಿಡಿಯೋಗಳು ವೈರಲ್ ಆಗಿವೆ. ನಿಮ್ಮ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಹಲವು ಪ್ರತಿಕ್ರಿಯೆಗಳು ಬಂದಿವೆ. ಜನಪ್ರತಿನಿಧಿಗಳು ತಮ್ಮ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಇದು ಸಮಾಜದ ಮೇಲೆ ದೀರ್ಘಕಾಲೀನ ಪ್ರಭಾವವನ್ನು ಉಂಟುಮಾಡುತ್ತದೆ ಎಂದು ರೂಪಾಲಿ ಚಕಂಕರ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ನೀವು ರಾಜ್ಯ ಮಹಿಳಾ ಆಯೋಗದ ಮುಂದೆ ನಿಮ್ಮ ಸ್ಪಷ್ಟೀಕರಣವನ್ನು ಮೂರು ದಿನಗಳಲ್ಲಿ ಸಲ್ಲಿಸಬೇಕು. ಒಂದು ರಾಜ್ಯದ ಪ್ರಗತಿಯನ್ನು ಮಹಿಳೆಯರು ಮತ್ತು ಅವರ ಸುರಕ್ಷತೆಯ ಮೇಲೆ ವ್ಯಾಖ್ಯಾನಿಸಲಾಗಿದೆ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.