ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂದೆಯ ಎದುರು ಸಿಕ್ಕಿಬೀಳುವ ಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವತಿ ಎಂಟನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿವೆ.
ಮೃತ ಯುವತಿಯನ್ನು 22 ವರ್ಷದ ಸಕೀನಾ ಬೇಗಂ ಎಂದು ಗುರುತಿಸಲಾಗಿದೆ.
ಯುವತಿಯ ತಂದೆಗೆ ಸೇರಿದ್ದ ಖಾಲಿ ಫ್ಲ್ಯಾಟ್‌ನಲ್ಲಿ ಯುವತಿ ತನ್ನ ಗೆಳೆಯನೊಂದಿಗೆ ಬಂದಿದ್ದಳು. ಫ್ಲ್ಯಾಟ್‌ನಲ್ಲಿ ಯಾರೂ ವಾಸವಿರದ ಕಾರಣ ಸಕೀನಾ ತಂದೆಯ ಬಳಿಯೇ ಇದ್ದ ಕೀಯನ್ನು ಬಳಸಿಕೊಂಡು ಗೆಳೆಯನೊಂದಿಗೆ ಒಳಗೆ ಹೋಗಿದ್ದಾಳೆ ಇದೇ ವೇಳೆ, ಅಚಾನಕ್ಕಾಗಿ ತಂದೆ ಸ್ಥಳಕ್ಕೆ ಆಗಮಿಸಿದ್ದಾರೆ.
ಫ್ಲ್ಯಾಟ್ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ ತಂದೆ ಬಾಗಿಲು ತಟ್ಟಿದ್ದಾರೆ. ಇದರಿಂದ ಗಾಬರಿಗೊಂಡ ಯುವತಿ ಹಾಗೂ ಆಕೆಯ ಗೆಳೆಯ ಅಲ್ಲಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇಬ್ಬರೂ ಬಾಲ್ಕನಿಯಿಂದ ಕೆಳಗೆ ಇಳಿಯಲು ಯತ್ನಿಸಿದ್ದು, ಈ ವೇಳೆ ಸಕೀನಾ ಕೈ ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಗೆಳೆಯ ಅಲಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

