ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ- 3ರ ಲ್ಯಾಂಡಿಂಗ್ ಗೆ ಕ್ಷಣಗಣನೆ ಬಾಕಿ ಉಳಿದಿದ್ದು, ಇಡೀ ವಿಶ್ವದ ಚಿತ್ತ ಈಗ ಭಾರತದ ಕಡೆಯತ್ತ ನೆಟ್ಟಿದೆ.
ಈ ಮಹತ್ವಾಕಾಂಕ್ಷಿ ಪ್ರಕ್ರಿಯೆ ಬುಧವಾರ ನಡೆಯಲಿದ್ದು, ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಈ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಉತ್ಸಾಹ ಮತ್ತು ಕಾತರ ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶ ಆವಿಷ್ಕಾರದಲ್ಲಿ ಗಮನಾರ್ಹ ಕೊಡುಗೆ ನೀಡಿರುವ ಸುನಿತಾ, ಚಂದ್ರನ ದಕ್ಷಿಣ ಧ್ರುವದ ಮೇಲೆ ಪ್ರಗ್ಯಾನ್ ರೋವರ್ ಸುಗಮವಾಗಿ ಇಳಿದು, ಅಲ್ಲಿ ನಡೆಸುವ ಸಂಶೋಧನೆಗಳನ್ನು ಕಂಡುಕೊಳ್ಳಲು ಬಹಳ ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ನಾಸಾದ ಗಗನಯಾನಿ ಸುನಿತಾ, ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರಕ್ಕೆ ಹೊಸ ರೂಪ ನೀಡುವಲ್ಲಿನ ಭಾರತದ ಪಾತ್ರವನ್ನು ಕೊಂಡಾಡಿದ್ದಾರೆ.
ಸುನಿತಾ ವಿಲಿಯಮ್ಸ್ ಅವರ ಹೇಳಿಕೆಯನ್ನು ನ್ಯಾಷನಲ್ ಜಿಯೋಗ್ರಫಿಕ್ ಆಫ್ ಇಂಡಿಯಾ ಹಂಚಿಕೊಂಡಿದ್ದು, ಇದು ಹೊಸ ವಿಚಾರಗಳನ್ನು ತಿಳಿಸುವ ಜ್ಞಾನ ಹಂಚುವುದು ಮಾತ್ರವಲ್ಲದೆ, ನಮ್ಮ ಗ್ರಹದ ಆಚೆಗೆ ಇರುವ ಸಮೃದ್ಧತೆಯ ಆವಿಷ್ಕಾರಕ್ಕೆ ಅಗತ್ಯವಾಗಿದೆ ಎಂದಿದ್ದಾರೆ.
ಚಂದ್ರನ ಮೇಲೆ ಇಳಿಯುವುದು ನಮಗೆ ಅತಿ ಮೌಲ್ಯಯುತವಾದ ಒಳನೋಟಗಳನ್ನು ಒದಗಿಸುತ್ತದೆ. ಬಾಹ್ಯಾಕಾಶ ಆವಿಷ್ಕಾರದಲ್ಲಿ ಮತ್ತು ಚಂದ್ರನದಲ್ಲಿನ ಜೀವಾಂಶಗಳನ್ನು ಅನ್ವೇಷಿಸುವ ಕಾರ್ಯದಲ್ಲಿ ಭಾರತ ಮುಂಚೂಣಿಯಲ್ಲಿ ಇರುವುದು ನನಗೆ ನಿಜಕ್ಕೂ ರೋಮಾಂಚನ ಉಂಟುಮಾಡಿದೆ. ಇವು ಖಂಡಿತವಾಗಿ ಉತ್ಸುಕತೆ ಮೂಡಿಸುವ ಸಮಯ ಎಂದು ಬಣ್ಣಿಸಿದ್ದಾರೆ.
ಚಂದ್ರನ ಸಂರಚನೆ ಮತ್ತು ಇತಿಹಾಸದ ಕುರಿತಾದ ನಮ್ಮ ತಿಳಿವಳಿಕೆಯನ್ನು ವಿಸ್ತರಿಸುವಲ್ಲಿ ಈ ಸಾಹಸವು ಮತ್ತೊಂದು ಹೆಜ್ಜೆ ಇರಿಸಲಿದೆ ಎಂದಿದ್ದಾರೆ.
ಚಂದ್ರನ ಅನ್ವೇಷಣೆಗಳ ಕುರಿತು ಬಹಳ ರೋಮಾಂಚನದಿಂದ ಕಾದಿದ್ದೇನೆ. ಈ ಲ್ಯಾಂಡಿಂಗ್ನಿಂದ ಬರುವ ವೈಜ್ಞಾನಿಕ ಫಲಿತಾಂಶಗಳನ್ನು ಮತ್ತು ರೋವರ್ನ ಮಾದರಿ ಸಂಗ್ರಹದ ಕಾರ್ಯಗಳನ್ನು ನೋಡಲು ನಾನು ಕಾತರಳಾಗಿದ್ದೇನೆ. ಇದು ಬಹುದೊಡ್ಡ ಹೆಜ್ಜೆ ಆಗಲಿದೆ ಎಂದು ಹೇಳಿದ್ದಾರೆ.
ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ಆಗಸ್ಟ್ 23ರ ಬುಧವಾರದ ಸಂಜೆ 6.04ರ ಸಮಯವನ್ನು ನಿಗದಿಪಡಿಸಿದೆ.