ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್ ಸ್ಟ್ರೀಕ್ ಜೀವಂತವಾಗಿದ್ದಾರೆ: ಸ್ಪಷ್ಟನೆ ನೀಡಿದ ಹೆನ್ರಿ ಒಲಾಂಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಿಂಬಾಬ್ವೆ ಕ್ರಿಕೆಟ್ ದಿಗ್ಗಜ ಆಲ್ ರೌಂಡರ್ ಹೀತ್ ಸ್ಟ್ರೀಕ್ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಇಂದು ಹರಿದಾಡಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಸ್ಟ್ರೀಕ್‌ ಇನ್ನಿಲ್ಲ ಎಂದು ಹೇಳಲಾಗಿತ್ತು. ಆದರೆ ಈ ಕುರಿತು ಜಿಂಬಾಬ್ವೆಯ ಮತ್ತೋರ್ವ ಮಾಜಿ ಆಟಗಾರ ಹೆನ್ರಿ ಒಲಾಂಗ ಸ್ಪಷ್ಟನೆ ನೀಡಿದ್ದು, ಸ್ಟ್ರೀಕ್‌ ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.

ಮೊದಲಿಗೆ ಹೀತ್‌ ಸ್ಟ್ರೀಕ್‌ ಮೃತಪಟ್ಟಿದ್ದಾರೆ ಎಂದು ತಿಳಿದು ಹೆನ್ರಿ ಒಲಾಂಗ ತಮ್ಮ ಟ್ವಿಟರ್‌ ಖಾತೆಯಲ್ಲಿ ಸಂತಾಪ ಸೂಚಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್‌ ಮಾಡಿದ ಅವರು, ಹೀತ್‌ ಸ್ಟ್ರೀಕ್‌ ಜೊತೆಗಿನ ವಾಟ್ಸ್‌ಆಪ್‌ ಸಂಭಾಷಣೆಯ ಸ್ಕ್ರೀನ್‌ ಶಾಟ್‌ ಅನ್ನು ಶೇರ್‌ ಮಾಡಿಕೊಂಡಿದ್ದು, ಅದರಲ್ಲಿ ಹೀತ್‌ ಸ್ಟ್ರೀಕ್‌ ‘ನಾನಿನ್ನೂ ಬದುಕಿದ್ದೇನೆ’ ಎಂದು ಉತ್ತರ ನೀಡಿದ್ದಾರೆ.

ಬೇಸರ ವ್ಯಕ್ತಪಡಿಸಿದ್ದಾರೆ ಸ್ಟ್ರೀಕ್‌

“ಇದು ಸಂಪೂರ್ಣ ವದಂತಿ ಹಾಗೂ ಸುಳ್ಳು. ನಾನು ಬದುಕಿದ್ದೇನೆ, ಆರೋಗ್ಯವಾಗಿದ್ದೇನೆ. ಒಬ್ಬರ ಸಾವಿನ ಸುದ್ದಿ ಖಾತ್ರಿ ಪಡಿಸಿಕೊಳ್ಳದೆ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಚಾರ ಆಗುತ್ತದೆ ಎಂಬುದನ್ನು ನಂಬಲು ಕೂಡ ಸಾಧ್ಯವಾಗುತ್ತಿಲ್ಲ,” ಎಂದು ಹೀತ್ ಸ್ಟ್ರೀಕ್‌ ಹೇಳಿದ್ದಾರೆ ಎಂದು ಮಿಡ್‌ ಡೇ ವರದಿ ಮಾಡಿದೆ.

ಈ ರೀತಿಯ ಸುಳ್ಳು ಸುದ್ದಿ ಹರಡಿರುವುದರಿಂದ ನನಗೆ ಬೇಸರವಾಗಿದೆ ಎಂದು ಹೇಳಿಕೊಂಡಿರುವ ಹೀತ್‌ ಸ್ಟ್ರೀಕ್‌, ಸೋಷಿಯಲ್‌ ಮೀಡಿಯಾದಲ್ಲಿ ಈ ರೀತಿಯ ಮಾಹಿತಿ ನೀಡುವುದು ತಪ್ಪು ಎಂದಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿದ ಮೂಲವು ಕ್ಷಮಾಪಣೆ ಕೇಳಬೇಕು. ಈ ಸುದ್ದಿ ನನಗೆ ಅತೀವ ನೋವುಂಟು ಮಾಡಿದೆ ಎಂದು ಹೀತ್‌ ಸ್ಟ್ರೀಕ್‌ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!