ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಂಗ್ರೆಸ್‌ ಕಡೆಗಣಿಸಿದೆ – ಅಶ್ವತ್ಥನಾರಾಯಣ್ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಆ.23) ಸರ್ವಪಕ್ಷಗಳ ಸಭೆಯ ಕುರಿತಾಗಿ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಟ್ಟ ಬಳಿಕ ಇದೀಗ ತರಾತುರಿಯಲ್ಲಿ ಸರ್ವಪಕ್ಷ ಸಭೆ ಕರೆದಿದೆ. “ಊರು ಕೊಳ್ಳೆ ಹೋದ ಮೇಲೆ ಡಿಡ್ಡಿ ಬಾಗಿಲು ಹಾಕಿದಂತೆ” ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಆಕ್ಷೇಪ

ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ತಮಿಳುನಾಡಿಗೆ ನೀರನ್ನು ಬಿಟ್ಟು ಇದೀಗ ಸರ್ವ ಪಕ್ಷ ಸಭೆ ಕರೆದಿರುವುದು ಸರಿಯಲ್ಲ. 26ನೇ ತಾರೀಕು ಸುಪ್ರೀಂ ಕೋರ್ಟ್‍ನಲ್ಲಿ ಸಮರ್ಥವಾಗಿ ರಾಜ್ಯದ ಪರವಾಗಿ ವಾದ ಮಂಡನೆ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲವೆಂದು ಮನದಟ್ಟು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಕಾನೂನು ತೊಡಕು ನಿವಾರಿಸಿ – ಡಿವಿಎಸ್

ಡಿ.ವಿ. ಸದಾನಂದಗೌಡ ಅವರು ಮಾತನಾಡಿ, ನೀರು ಬಿಟ್ಟ ಬಳಿಕ ಸರ್ವಪಕ್ಷ ಸಭೆ ಕರೆದಿರುವುದು ಸರಿಯಲ್ಲ. ಮೇಕೆದಾಟು ಯೋಜನೆ ಬಗ್ಗೆ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕಿದೆ. ತಮಿಳುನಾಡಿನಲ್ಲಿ ಇರುವ ಡ್ಯಾಮ್‍ಗಳ ನೀರಿನ ವಿವರ, ಅಲ್ಲಿನ ರೈತರ ಬೆಳೆ ಪದ್ಧತಿ, ಮೂರು ಬೆಳೆಯನ್ನ ಬೆಳೆಯುತ್ತಿರುವುದರ ಬಗ್ಗೆ ಅವರು ತಿಳಿಸಿದರು. ನಮ್ಮ ರೈತರು ಕೇವಲ ಎರಡು ಬೆಳೆ ಮಾತ್ರ ಬೆಳೆಯುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟಿಗೆ ಮನದಟ್ಟು ಮಾಡಿಕೊಟ್ಟು ಮೇಕೆದಾಟು ಯೋಜನೆ ಬಗ್ಗೆ ಅನುಮತಿ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಐಸಿಸಿ ಸಭೆ ಕರೆದಿಲ್ಲವೇಕೆ? – ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಭೆಯನ್ನೇ ಕರೆದಿಲ್ಲ. ಐಸಿಸಿ ಸಭೆಯಲ್ಲಿ ಕರ್ನಾಟಕದ ರೈತರಿಗೆ ರಾಗಿ ಬೆಳೆಯಿರಿ, ಹುರುಳಿ ಬೆಳೆಯಿರಿ ಎಂದು ಹೇಳಿ ತಮಿಳುನಾಡು ರೈತರಿಗೆ ನೀರು ಕೊಟ್ಟಿದ್ದೀರಾ ಎಂದು ಆಕ್ಷೇಪಿಸಿದರು. ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡಿಗೆ ಕೊಡಬೇಕಾಗಿರುವ ನೀರಿಗಿಂತಲೂ ಕಡಿಮೆ ನೀರನ್ನು ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ, ಕರ್ನಾಟಕದ ರೈತರಿಗೆ ಬಿಟ್ಟಿರುವ ನೀರು ಎಷ್ಟು ಎಂದು ಹೇಳುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇಕೆದಾಟು ಮತ್ತು ಮಹದಾಯಿ ಯೋಜನೆ ಬಗ್ಗೆ ಸರ್ವಪಕ್ಷದ ನಿಯೋಗವನ್ನು ಪ್ರಧಾನಮಂತ್ರಿ ಬಳಿಗೆ ಕೊಂಡೊಯ್ಯುವುದಾಗಿ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, ಎರಡು ಎರಡು ವಿಚಾರಗಳು ಸುಪ್ರೀಂ ಕೋರ್ಟ್‍ನಲ್ಲಿ ಇವೆ. ಗೋವಾ ಸರ್ಕಾರ ಮಹದಾಯಿ ವಿಚಾರವಾಗಿ ಅರಣ್ಯಾಧಿಕಾರಿ ಮೂಲಕ ಆಕ್ಷೇಪಣ ಪತ್ರವನ್ನು ನೀಡಿದೆ ಎಂದರು.

ರಾಜ್ಯದ ರೈತರ ಹಿತವನ್ನು ಕಾಪಾಡಲು ಬಿಜೆಪಿ ಬದ್ಧವಾಗಿದೆ ಆದ್ದರಿಂದ ರೈತರ ಪರವಾಗಿ ನಾವು ಸಹಕಾರ ಕೊಡುತ್ತೇವೆ ರೈತರ ಹಿತ ಕಾಪಾಡಲು ಬಿಜೆಪಿ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!