ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಹಾರಾಟದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಎದುರಿಸಿ ರಾಜಧಾನಿಗೆ ಮರಳಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಪ್ರಯಾಣಿಕರಲ್ಲಿ ಆತಂಕ ಉಂಟಾದರೂ, ವಿಮಾನ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ದೊಡ್ಡ ಅಪಾಯ ತಪ್ಪಿದೆ.
ಸೋಮವಾರ ಬೆಳಿಗ್ಗೆ 6:10ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್ ಇಂಡಿಯಾ 887 ವಿಮಾನವು ಟೇಕಾಫ್ ಆದ ಬಳಿಕ ಬಲಭಾಗದ ಇಂಜಿನ್‌ನಲ್ಲಿ ದೋಷ ಕಂಡುಬಂದಿದೆ. ಹಾರಾಟದ ವೇಳೆ ಇಂಜಿನ್‌ನ ಆಯಿಲ್ ಪ್ರೆಶರ್ ಏಕಾಏಕಿ ಶೂನ್ಯ ಮಟ್ಟಕ್ಕೆ ಕುಸಿದ ಕಾರಣ, ಪೈಲಟ್‌ಗಳು ತಕ್ಷಣ ತುರ್ತು ಕ್ರಮ ಕೈಗೊಂಡಿದ್ದಾರೆ. ವಿಮಾನವು 6:52ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲೇ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಡಿಜಿಸಿಎ ತಿಳಿಸಿದೆ.
ಅವಳಿ ಇಂಜಿನ್ ಹೊಂದಿರುವ ವಿಮಾನಗಳು ಒಂದೇ ಇಂಜಿನ್‌ನ ಸಹಾಯದಿಂದ ಭೂಸ್ಪರ್ಶ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ, ಎಲ್ಲ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಸುರಕ್ಷಿತರಾಗಿದ್ದಾರೆ. ವಿಮಾನದಲ್ಲಿದ್ದವರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

