ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಕ್ಸ್ ಗುಂಪಿನ ಸದಸ್ಯ ರಾಷ್ಟ್ರಗಳ ಸಂಖ್ಯೆ ಇನ್ನು ಮುಂದೆ 5ಅಲ್ಲ, 9. ಹೊಸದಾಗಿ ಆರು ರಾಷ್ಟ್ರಗಳ ಸೇರ್ಪಡೆಗೆ ಬ್ರಿಕ್ಸ್ ನಾಯಕರ ಗುಂಪು ಅನುಮತಿ ಕೊಟ್ಟಿದೆ. ಅರ್ಜೆಂಟೀನಾ, ಇಥಿಯೋಪಿಯಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳಿಗೆ ಪೂರ್ಣ ಸದಸ್ಯತ್ವ ನೀಡಲು ಬ್ರಿಕ್ಸ್ ರಾಷ್ಟ್ರಗಳ ಗುಂಪು ಗುರುವಾರ ನಿರ್ಧರಿಸಿದೆ.
ಹೊಸ ಸದಸ್ಯತ್ವವು ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ (BRICS) ನಾಯಕರು ಗುಂಪಿನ ವಿಸ್ತರಣೆಯನ್ನು ಬೆಂಬಲಿಸಿದರು. 2010 ರಲ್ಲಿ ದಕ್ಷಿಣ ಆಫ್ರಿಕಾವನ್ನು ಗುಂಪಿನಲ್ಲಿ ಸೇರಿಸಿಕೊಂಡ ನಂತರ ಮೊದಲ ಬಾರಿಗೆ ವಿಸ್ತರಣೆಯಾಗಿದೆ.
ಮೊದಲ ಹಂತದ ವಿಸ್ತರಣೆಯ ಭಾಗವಾಗಿ ಬ್ರಿಕ್ಸ್‌ಗೆ ಸೇರಲು ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗೆ ಆಹ್ವಾನ ನೀಡಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಘೋಷಿಸಿದರು.
ಈ ವಿಸ್ತರಣೆಯೊಂದಿಗೆ, ವಿಶ್ವದ ಒಂಬತ್ತು ದೊಡ್ಡ ತೈಲ ಉತ್ಪಾದಕರಲ್ಲಿ ಆರು ರಾಷ್ಟ್ರಗಳು BRICSನ ಭಾಗವಾಗಿದೆ. ಬ್ರಿಕ್ಸ್‌ನ ವಿಸ್ತರಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ ಮತ್ತು ಹೊಸ ಸದಸ್ಯರನ್ನು ಸೇರಿಸುವುದರಿಂದ ಸಂಘಟನೆಯಾಗಿ ಬ್ರಿಕ್ಸ್ ಗುಂಪನ್ನು ಬಲಪಡಿಸುತ್ತದೆ ಎಂಬುದನ್ನು ನಾನು ಯಾವಾಗಲೂ ನಂಬುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.