ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಪ್ರತೀ ಮನೆಯಲ್ಲಿಯೂ ಹೆಣ್ಣುಮಕ್ಕಳು ಮಹಾಲಕ್ಷ್ಮಿಗೆ ಅಲಂಕಾರ ಮಾಡಿ, ನೈವೇದ್ಯ ಇಟ್ಟು ಪೂಜಿಸುತ್ತಿದ್ದಾರೆ. ಇದು ವಿಶೇಷವಾಗಿ ಮಹಿಳೆಯರ ಹಬ್ಬವಾಗಿದ್ದು, ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಮನೆಯಲ್ಲಿ ಪೂಜಿಸಿ ತದನಂತರ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಹಬ್ಬ ಆಚರಿಸುವ ಮಹಿಳಾಮಣಿಗಳಿಗೆ ರಾಜ್ಯದ ಮುಜರಾಯಿ ಇಲಾಖೆ ಗುಡ್ನ್ಯೂಸ್ ನೀಡಿದ್ದು, ರಾಜ್ಯದ ಎಲ್ಲಾ ಮುಜರಾಯಿ ದೇಗುಲಗಳಲ್ಲಿ ಮಹಿಳೆಯರಿಗೆ ಅರಿಶಿಣ, ಕುಂಕುಮ, ಕಾಯಿಕಣ ನೀಡಲಾಗುತ್ತದೆ.
ವರಮಹಾಲಕ್ಷ್ಮಿ ಮಾರಾಟಗಾರರಿಗೂ ಉತ್ತಮ ದಿನವಾಗಿದ್ದು, ಖರೀದಿ ಭರಾಟೆ ಜೋರಾಗಿದೆ. ಹೂವು, ಹಣ್ಣು, ಬಾಳೆಕಂದು, ಮಾವಿನ ಎಲೆ ಖರೀದಿ ಜೋರಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ ವರಲಕ್ಷ್ಮಿ ಮಾತೆ ಭಗವಾನ್ ವಿಷ್ಣುವಿನ ಪತ್ನಿ, ಆಕೆ ಮಹಾಲಕ್ಷ್ಮಿಯ ಅವರತಾರವನ್ನು ತಾಳುತ್ತಾಳೆ. ಶುಕ್ರವಾರದಂದು ಪೂಜೆ ಮಾಡಿದರೆ ಮನೆಯಲ್ಲಿ ಹಣದ ಕೊರತೆ ಆಗುವುದಿಲ್ಲ ಎನ್ನುವುದು ನಂಬಿಕೆ.
ಪೂಜೆ ಮಾಡುವುದು ಹೇಗೆ?
ವರಮಹಾಲಕ್ಷ್ಮಿಯ ದಿನದಂದು ತಲೆಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಬೇಕು. ಸ್ನಾನಕ್ಕೂ ಮುನ್ನ ಮನೆಯನ್ನು ಶುಭ್ರಗೊಳಿಸಿರಬೇಕು. ಮನೆಯ ಹೊರಗೆ ರಂಗೋಲಿ ಹಾಕಬೇಕು. ಭಗವಾನ್ ವಿಷ್ಣುವಿನ ವಿಗ್ರಹವನ್ನು ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಕಳಸವಿಟ್ಟು, ತೆಂಗಿನಕಾಯಿ ಇಟ್ಟು ಅದಕ್ಕೆ ದೇವೀ ಮುಖವನ್ನು ತೊಡಿಸಿ ಸೀರೆ ಉಡಿಸಿ, ನಂತರ ಒಡವೆಗಳನ್ನು ತೊಳೆದು ನಂತರ ದೇವರಿಗೆ ತೊಡಿಸಿ. ಹೂವುಗಳಿಂದ ಅಲಂಕರಿಸಿ, ಮುತ್ತೈದೆಯರನ್ನು ಕರೆಸಿ ಬಾಗಿನ ನೀಡಿ ಪೂಜಿಸಿ. ಹಬ್ಬಕ್ಕೆ ಸಿಹಿಯೂಟ ಮಾಡಬೇಕು.