ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರೀ ಕೊಟ್ಟರೆ ಅವಶ್ಯಕತೆ ಇಲ್ಲ ಅಂದ್ರೂ ಜನ ಆ ವಸ್ತುವಿಗಾಗಿ ಮುಗಿಬೀಳುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ನಡೆದ ಘಟನೆಯೇ ಸಾಕ್ಷಿ. ಮೆಂತ್ಯೆ ಸೊಪ್ಪನ್ನು ಕೇಳೋರೇ ಇಲ್ಲದ ಕಾರಣ ಟ್ರಾಕ್ಟರ್ ತುಂಬಾ ಇದ್ದ ಸೊಪ್ಪನ್ನು ರೈತ ಉಚಿತವಾಗಿ ಕೊಟ್ಟಿದ್ದಾನೆ.
ಘಟಪ್ರಭಾದಿಂದ ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಗೆ ಟ್ರ್ಯಾಕ್ಟರ್ನಲ್ಲಿ ಮೆಂತ್ಯೆ ಸೊಪ್ಪನ್ನು ತಂದಿದ್ದ ರೈತನೊಬ್ಬ ವ್ಯಾಪಾರವಾಗದೆ ಕೊನೆಗೆ 1 ರೂಪಾಯಿಗೆ ಒಂದು ಕಟ್ಟು ಮೆಂತ್ಯೆ ಸೊಪ್ಪನ್ನು ಮಾರಾಟಕ್ಕಿಟ್ಟಿದ್ದಾನೆ. ಆದರೆ, ಒಂದು ರೂಪಾಯಿ ಅಂದರೂ ಜನ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಕ್ಕೆ ಉಚಿತವಾಗಿ ಮೆಂತ್ಯೆ ಸೊಪ್ಪನ್ನು ಹಂಚಿದ್ದಾರೆ.
ಯುವ ರೈತ ಟ್ರ್ಯಾಕ್ಟರ್ ಮೇಲೆ ನಿಂತು ಬನ್ನಿ ಬನ್ನಿ ಮೆಂತ್ಯೆ ಸೊಪ್ಪು ಫ್ರೀ..ಫ್ರೀ..ಎಂದು ಕೂಗುತ್ತಿದ್ದಂತೆ ಎಲ್ಲಿಲ್ಲದೆ ಜನಸ್ತೋಮ ನೆರೆಯಿತು. ಗಾಡಿಯಿಂದ ಸೊಪ್ಪನ್ನು ನೆಲಕ್ಕೆ ತೂರಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಕಡೆ ಗುಡ್ಡೆ ಹಾಕಿ ಮೆಂತ್ಯೆ ಸೊಪ್ಪು ಉಚಿತ ಎಂದು ಬಂದವರಿಗೆಲ್ಲಾ ದಾನ ಮಾಡಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ 10ರೂಪಾಯಿಗೆ ಕಟ್ಟೊಂದರಂತೆ ಮಾರಾಟವಾಗಿತ್ತು. ಆದ್ರೆ ಇದೀಗ ಕೇಳೋರೆ ಇಲ್ಲದಂತಾಗಿ, ತಂದಿದ್ದ ಬೆಳೆಯನ್ನು ಉಚಿತವಾಗಿ ಕೊಟ್ಟ ಪರಿಸ್ಥಿತಿ ಬಂದಿದೆ.