ಹೊಸ ದಿಗಂತ ವರದಿ, ಅಂಕೋಲಾ:
ಅರ್ಗಾದ ಸೀಬರ್ಡ್ ನೌಕಾನೆಲೆ ಯೋಜನಾ ಪ್ರದೇಶದಿಂದ ಲಾರಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಜನರು ಮತ್ತು ಸಂಘಟನೆಗಳು ಲಾರಿಯನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು 18 ಗೋವುಗಳನ್ನು ರಕ್ಷಸಿ ಗೋವುಗಳನ್ನು ಸಾಗಿಸುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ನೌಕಾನೆಲೆ ಯೋಜನಾ ಪ್ರದೇಶದಿಂದ ನಕಲಿ ಪರವಾಗಿ ಪತ್ರದೊಂದಿಗೆ 18 ಗೋವುಗಳನ್ನು ಲಾರಿಯಲ್ಲಿ ಕಲಬುರ್ಗಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು, ಚೆಂಡಿಯಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಂಕೋಲಾ ಗೋ ಪ್ರೇಮಿಗಳ ಸಂಘದ ಸದಸ್ಯರು ಲಾರಿಯನ್ನು ತಡೆದು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಪೊಲೀಸ್ ಠಾಣೆ ಎದುರು ಜಮಾಯಿಸಿದ ಗೋ ಪ್ರೇಮಿಗಳು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನಿರ್ಬಂಧಿತ ನೌಕಾನೆಲೆ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ಗೋವುಗಳನ್ನು ಲಾರಿಯಲ್ಲಿ ತುಂಬಿ ತರಲಾಗಿತ್ತೆ? ಅಥವಾ ನೌಕಾನೆಲೆ ಅಧಿಕಾರಿಗಳ ಅಥವಾ ಸಿಬ್ಬಂದಿಗಳ ಅನುಮತಿಯೊಂದಿಗೆ ಈ ಕೃತ್ಯ ನಡೆದಿದೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಬೇಕಿದೆ.