Monday, December 22, 2025

ಗೆದ್ದ ಪದಕಗಳೇ ಈಗ ಪ್ರತಿಭಟನೆಯ ಅಸ್ತ್ರ: ಯಾದಗಿರಿಯ ಅಂತಾರಾಷ್ಟ್ರೀಯ ಕ್ರೀಡಾಪಟುವಿನ ಕಣ್ಣೀರು!

ಹೊಸದಿಗಂತ ಯಾದಗಿರಿ:

ಜಿಲ್ಲೆಯ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದ ಪ್ರತಿಭೆಯೊಬ್ಬರು ಇಂದು ವ್ಯವಸ್ಥೆಯ ವಿರುದ್ಧ ಬೀದಿಗಿಳಿದಿದ್ದಾರೆ. ಜಿಲ್ಲಾ ಕ್ರೀಡಾಂಗಣದ ದುಸ್ಥಿತಿ ಮತ್ತು ಜಿಲ್ಲಾಡಳಿತದ ಕಡು ನಿರ್ಲಕ್ಷ್ಯದಿಂದ ಬೇಸತ್ತ ಅಂತಾರಾಷ್ಟ್ರೀಯ ಕ್ರೀಡಾಪಟು ಲೋಕೇಶ್ ರಾಠೋಡ್, ತಾವು ಗೆದ್ದ ಪದಕಗಳ ಸಮೇತ ನಗರದ ಜಿಲ್ಲಾ ಕ್ರೀಡಾಂಗಣದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಾಧನೆಯ ಶಿಖರ ಏರಿದರೂ ಸಿಗದ ಮನ್ನಣೆ: ಕಳೆದ ತಿಂಗಳು ರಾಜಸ್ಥಾನದ ಜೈಪೂರಿನಲ್ಲಿ ನಡೆದ ಪ್ರತಿಷ್ಠಿತ ‘ಖೇಲೋ ಇಂಡಿಯಾ’ ಕ್ರೀಡಾಕೂಟದಲ್ಲಿ ಲೋಕೇಶ್ ರಾಠೋಡ್ ತೃತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದರು. ಅಥ್ಲೆಟಿಕ್ ಇವೆಂಟ್‌ನಲ್ಲಿ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಪದಕಗಳನ್ನು ಬಾಚಿಕೊಂಡಿರುವ ಇವರು, ಜಿಲ್ಲೆಯ ಅಪ್ರತಿಮ ಕ್ರೀಡಾ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2025ರ ರಾಷ್ಟ್ರೀಯ ಡೆಕತ್ಲಾನ್ ಸ್ಪರ್ಧೆಗೆ ಸಿದ್ಧತೆ ನಡೆಸಲು ಜಿಲ್ಲೆಯಲ್ಲಿ ಸೂಕ್ತವಾದ ಮೈದಾನವಿಲ್ಲ. ಅಭ್ಯಾಸಕ್ಕಾಗಿ ಪ್ರತಿ ಬಾರಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಆರ್ಥಿಕ ಮುಗ್ಗಟ್ಟು ಮತ್ತು ದೂರದ ಪ್ರಯಾಣದ ಕಾರಣದಿಂದಾಗಿ ಹಲವು ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಲೋಕೇಶ್‌ಗೆ ಸಾಧ್ಯವಾಗುತ್ತಿಲ್ಲ.

ಖೇಲೋ ಇಂಡಿಯಾದಲ್ಲಿ ಪದಕ ಗೆದ್ದಾಗ ಕನಿಷ್ಠ ಪಕ್ಷ ಜಿಲ್ಲಾಡಳಿತದಿಂದ ಒಂದು ಅಭಿನಂದನೆಯ ಕರೆ ಕೂಡ ಬಂದಿಲ್ಲ ಎಂದು ಲೋಕೇಶ್ ನೋವು ತೋಡಿಕೊಂಡಿದ್ದಾರೆ.

“ನಾನು ದೇಶಕ್ಕಾಗಿ, ಜಿಲ್ಲೆಗಾಗಿ ಪದಕ ಗೆದ್ದಿದ್ದೇನೆ. ಆದರೆ ನಮ್ಮ ಜಿಲ್ಲೆಯಲ್ಲೇ ಅಭ್ಯಾಸ ಮಾಡಲು ಸರಿಯಾದ ಮೈದಾನವಿಲ್ಲ ಎಂದರೆ ಇದಕ್ಕಿಂತ ದುರಂತ ಮತ್ತೊಂದಿಲ್ಲ,” ಎಂದು ಲೋಕೇಶ್ ರಾಠೋಡ್ ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

error: Content is protected !!