ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ-3 (Chandrayaan-3) ಯಶಸ್ಸಿಗೆ ಇಸ್ರೋ ಸಂಸ್ಥೆಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ವಿಜ್ಞಾನಿಗಳ ಈ ಸಾಧನೆ ಎಲ್ಲರಿಗೂ ಪ್ರೇರಣೆ ಆಗಿದೆ. ಚಂದ್ರಯಾನದ ಯಶಸ್ಸಿನಲ್ಲಿ ಮಹಿಳಾ ವಿಜ್ಞಾನಿಗಳ ಪಾಲು ಇದೆ. ಅವರ ಕೊಡುಗೆ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ನರೇಂದ್ರ ಮೋದಿ (Narendra Modi) ಅವರು ವಿಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.
ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದನ್ನು ಗುರುತಿಸುವುದಕ್ಕಾಗಿ ಕೇಂದ್ರ ಸಚಿವ ಸಂಪುಟ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ'(National Space Day) ಎಂದು ಘೋಷಿಸಿದೆ.
ಇಸ್ರೋ ವಿಜ್ಞಾನಿಗಳ ಐತಿಹಾಸಿಕ ಯಶಸ್ಸನ್ನು ಸಚಿವ ಸಂಪುಟ ಶ್ಲಾಘಿಸುತ್ತದೆ. ಇದು ಜಾಗತಿಕ ವೇದಿಕೆಯಲ್ಲಿ ನಮ್ಮ ಶಕ್ತಿಯ ಸಂಕೇತವಾಗಿದೆ. ಸಚಿವ ಸಂಪುಟವು ಆಗಸ್ಟ್ 23 ಅನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಆಚರಿಸುವ ಕ್ರಮವನ್ನು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
ಇಂದಿನ ಯುಗದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿರುವ ದೇಶವು ಇತಿಹಾಸ ಸೃಷ್ಟಿಸುತ್ತದೆ. ನಮ್ಮ ಯುವ ಪೀಳಿಗೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಲು, ನಾವು ನಮ್ಮ ಚಂದ್ರಯಾನ-3 ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ದಿನವಾದ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸುತ್ತದೆ ಎಂದಿದ್ದಾರೆ ಠಾಕೂರ್.
ಚಂದ್ರನ ಮೇಲಿರುವ ಎರಡು ಪಾಯಿಂಟ್ಗಳಿಗೆ ತಿರಂಗಾ ಮತ್ತು ಶಿವಶಕ್ತಿ ಎಂದು ಹೆಸರಿಸಿರುವ ಕುರಿತು ಮಾತನಾಡಿದ ಸಚಿವರು, ಈ ಹೆಸರುಗಳು ಆಧುನಿಕತೆಯ ಚೈತನ್ಯವನ್ನು ಅಳವಡಿಸಿಕೊಂಡು ನಮ್ಮ ಗತಕಾಲದ ಸಾರವನ್ನು ಬಿಂಬಿಸುತ್ತದೆ ಎಂದು ಹೇಳಿದರು.
ಅದೇ ವೇಳೆ ಎಲ್ಲಾ ಗ್ರಾಹಕರಿಗೆ ಪ್ರತಿ LPG ಸಿಲಿಂಡರ್‌ಗೆ ರೂ 200 ಹೆಚ್ಚುವರಿ ಸಬ್ಸಿಡಿಯನ್ನು ಕ್ಯಾಬಿನೆಟ್ ಅನುಮೋದಿಸಿದೆ. ಉಜ್ವಲ ಯೋಜನೆಯಡಿ 7.5 ಮಿಲಿಯನ್ ಹೊಸ ಗ್ಯಾಸ್ ಸಂಪರ್ಕಗಳಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂಪಾಯಿ ಹೆಚ್ಚುವರಿ ಸಬ್ಸಿಡಿ ಇಂದಿನಿಂದ ಜಾರಿಗೆ ಬಂದಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.