ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ಪ್ರತಿ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ (CWMA) ಸಭೆ ಸಮರ್ಥಿಸಿಕೊಂಡಿದೆ.
ಈ ಮೂಲಕ ರ್ನಾಟಕ (karnataka State) ನೀರು ಬಿಡಲೇಬೇಕಾದ ಒತ್ತಡಕ್ಕೆ ಒಳಗಾಗಿದೆ.
ಮಂಗಳವಾರ ದಿಲ್ಲಿಯಲ್ಲಿ ಎಸ್ ಕೆ ಹಲ್ದಾರ್ ನೇತೃತ್ವದಲ್ಲಿ ನಡೆದ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ತಮ್ಮ ತಮ್ಮ ವಾದವನ್ನು ಮಂಡಿಸಿದವು. ಕರ್ನಾಟಕದ ಪರವಾಗಿ ಹಿರಿಯ ಅಧಿಕಾರಿ ರಾಕೇಶ್ ಸಿಂಗ್ ವರ್ಚುವಲ್ ಆಗಿ ಭಾಗವಹಿಸಿದ್ದರೆ, ತಮಿಳುನಾಡಿನ ಪರವಾಗಿ ಅಲ್ಲಿನ ಎಸಿಎಸ್ ಸಂದೀಪ್ ಸಕ್ಸೇನಾ ಭಾಗಿಯಾಗಿದ್ದರು.
ಕರ್ನಾಟಕವು ಜೂನ್ 1ರಿಂದ ಆಗಸ್ಟ್ 27ರ ವರೆಗೆ 80 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ, ಇದುವರೆಗೆ (ಆಗಸ್ಟ್ 27ರವರೆಗೆ) ಕರ್ನಾಟಕ 30.17 ಟಿಎಂಸಿ ನೀರು ಮಾತ್ರ ಬಿಟ್ಟಿದೆ. ಕಾವೇರಿ ಕಾವೇರಿ ನೀರು ನಿಯಂತ್ರಣ ಸಮಿತಿ ಪ್ರತಿ ನಿತ್ಯ 5000 ಕ್ಯೂಸೆಕ್ ನೀರು ಬಿಡುಗಡೆಗೆ ಸೂಚಿಸಿದೆ ಎಂದು ತಮಿಳುನಾಡಿನ ಅಧಿಕಾರಿಗಳು ವಿವರಿಸಿದರು. ಕರ್ನಾಟಕದ ಅಧಿಕಾರಿಗಳು ನೀರು ಬಿಡಲು ಸಾಧ್ಯವಾಗದ ಅಸಹಾಯಕತೆಯನ್ನು ವಿವರಿಸಿದರು. ಅಂತಿಮವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೋಮವಾರ ಹೊರಡಿಸಿದ ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿಯಿತು. ಮುಂದಿನ 15 ದಿನಕ್ಕೆ ಅನ್ವಯ ಆಗುವಂತೆ ದಿನಕ್ಕೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಸೂಚಿಸಿತು.
ಇದರ ಜತೆಗೆ ಸೆಪ್ಟೆಂಬರ್ 1ರಂದು ನಡೆಯುವ ಸುಪ್ರೀಂಕೋರ್ಟ್‌ನ (Supreme Court) ವಿಶೇಷ ಪೀಠದ ಮುಂದೆ ತನ್ನ ವಿವರಣೆಯನ್ನು (Cauvery Dispute) ನೀಡಬಹುದಾಗಿದೆ.