ಹೊಸದಿಗಂತ ವರದಿ , ಹುಬ್ಬಳ್ಳಿ:
ನೀರಾವರಿ ಕೃಷಿ ಭೂಮಿಗೆ ಹಾಗೂ ಪಂಪಸೆಟ್ಗಳಿಗೆ ೧೨ ಗಂಟೆಗೆ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಇಲ್ಲಿಯ ನವನಗರದ ಹೆಸ್ಕಾಂಯಲ್ಲಿ ಸಮಾವೇಶಗೊಂಡ ಏಳು ಜಿಲ್ಲೆಯ ನೂರಾರು ರೈತರು ಹೆಸ್ಕಾ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರು.
ಮುಂಗಾರು ಮಳೆಯ ಅಭಾವದಿಂದ ಈಗಾಗಲೇ ಅನೇಕ ಸಮಸ್ಯೆ ಎದುರಿಸಲಾಗುತ್ತಿದೆ. ನೀರಾವರಿ ಬೆಳೆ ಅಲ್ಪಸ್ವಲ್ಪ ಬೆಳೆದಿದ್ದು, ಅದಕ್ಕೆ ನೀರ ಹಾಯಿಸಲು ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ರೈತರ ಹೆಸರಿನಲ್ಲಿ ಅಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ರೈತ ವಿರೋ ನೀತಿಯನ್ನು ಅನುಸರಿಸುತ್ತಿದ್ದು, ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರಿಗೆ ಅನುಕೂಲವಾಗಿದ್ದ ದಿನಕ್ಕೆ ೬ ಗಂಟೆ ತ್ರೀಪೇಸ್ ಹಾಗೂ ೬ ಗಂಟೆ ಸಿಂಗಲ್ ಪೇಸ್ ವಿದ್ಯುತ್ ಪೂರೈಕೆಯನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಬೆಳೆಯುತ್ತಿರುವ ಬೆಳೆಯು ಸಹ ಹಾಳಾಗುವ ಆತಂಕ ಎದುರಾಗಿದೆ. ವಿದ್ಯುತ್ನ್ನು ಲೋಡ್ಸೆಡ್ಡಿಂಗ್ ನೆಪದಲ್ಲಿ ಸ್ಥಗಿತಗೊಳಿಸಲಾಗಿದೆ. ಇದು ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಯ ರೈತರಿಗೆ ಸಮಸ್ಯೆ ಉಂಟು ಮಾಡಿದೆ. ರೈತರ ಬೇಡಿಕೆಯನ್ನು ಹೆಸ್ಕಾಂ ಅಕಾರಿಗಳು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.
ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಹೆಸ್ಕಾ ಎಂಡಿ ಮೊಹಮ್ಮದ ರೋಷನ್, ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ವಿದ್ಯುತ್ ಉತ್ಪಾದನೆ ಕೊರತೆಯಿಂದ ಕೃಷಿಗೆ ಸಮರ್ಪಕವಾಗಿ ನೀಡಲಾಗಿದ್ದಿಲ್ಲ. ಈಗ ಪರಿಹಾರ ಕಂಡುಕೊಂಡು ವಿದ್ಯುತ್ ನೀಡಲಾಗುತ್ತಿದೆ. ರೈತರಿಗೆ ನಿತ್ಯ ಹಗಲಿನಲ್ಲಿ ಕನಿಷ್ಠ ೩.೫ ಗಂಟೆ ೩ ಪೇಸ್ ಹಾಗೂ ರಾತ್ರಿ ೬ ಗಂಟೆ ಸಿಂಗಲ್ ಪೇಸ್ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಸರಕಾರ ಮತ್ತು ಹೆಸ್ಕಾಂ ಮೇಲೆ ಭರವಸೆ ಇಟ್ಟು ಪ್ರತಿಭಟನೆ ಕೈಬಿಡುವಂತೆ ರೋಷನ ಮನವಿ ಮಾಡಿದರು.