ಹೊಸದಿಗಂತ ವರದಿ ಶಿವಮೊಗ್ಗ :
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಗುರುವಾರದಿಂದ ವಿಮಾನ ಹಾರಾಟ ಅಧಿಕೃತವಾಗಿ ಆರಂಭವಾಗಿದ್ದು, ಬೆಳಗ್ಗೆ 10:50 ಕ್ಕೆ ಮೊದಲ ವಿಮಾನ ಇಲ್ಲಿನ ನಿಲ್ದಾಣಕ್ಕೆ ಬಂದಿಳಿಯಿತು.
ಮೊದಲು ಆಗಮಿಸಿದ ಈ ವಿಮಾನದಲ್ಲಿ ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಪರಿಷತ್ಸದಸ್ಯರಾದ ಭಾರತಿ ಶೆಟ್ಟಿ, ಜಿಲ್ಲಾ ವಾಣಿಜ್ಯ ಸಂಘದ ಪದಾಧಿಕಾರಿಗಳು ಮೊದಲಾದವರು ಇಲ್ಲಿಗೆ ಬಂದಿಳಿದರು.
ಬಳಿಕ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿನಡೆದ ಸಮಾರಂಭದಲ್ಲಿ ವಿಮಾನನಿಲ್ದಾಣಕ್ಕೆ ಸಂಬಂಧಿಸಿದ ಅಧಿಕೃತ ವೆಬ್ ಸೈಟ್ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಜಿಲ್ಲೆಯ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಪ್ರಯಾಣಿಕರ ಮೊದಲ ವಿಮಾನ ಸಂಚಾರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತಮ ಕೆಲಸವಾಗಿದೆ. ವಿಮಾನ ನಿಲ್ದಾಣದ ಜಿಲ್ಲೆಗೆ ಹೆಮ್ಮೆಯಾಗಿದೆ. ಪ್ರವಾಸೋದ್ಯಮ, ಶಿಕ್ಷಣ ಮೊದಲಾವುಗಳ ಬಗ್ಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ವಿಮಾನ ನಿಲ್ದಾಣದಿಂದ ವಾಣಿಜ್ಯ ಅನುಕೂಲವಾಗಿದೆ. ವುಡಾನ್ ಯೋಜನೆಯಲ್ಲಿ ಪ್ರಯಾಣಿಕರಿಗೆ ರಿಯಾಯಿತಿ ನೀಡಲಾಗುತ್ತದೆ. ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಲು ರೈತರ ಸಹಕಾರ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ರಾತ್ರಿ ಕೂಡ ವಿಮಾನ ಇಳಿಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಬಹಳ ದಿನಗಳ ಕನಸು ನನಸಾಗಿದೆ. ಪ್ರಧಾನಿಯವರ ವಿಶೇಷ ಆಸಕ್ತಿಯಿಂದ ಆಗಿದೆ. ಕೈಗಾರಿಕೆಗಳುಬರಲಿವೆ. ಕೆಲವೇ ವರ್ಷಗಳಲ್ಲಿ ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಅಧಿಕಾರಾವಧಿಯಲ್ಲಿ ಜಿಲ್ಲೆಗೆ ಬೇಕಾದ ಅಗತ್ಯ ಯೋಜನೆಗಳನ್ನು ಮಾಡಲಾಗಿದೆ ಎಂದರು.