ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ನಿರ್ದೇಶಕ ಅಟ್ಲಿ ಹಾಗೂ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ ‘ಜವಾನ್’. ಈ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ವಿಜಯ್ ಸೇತುಪತಿ ವಿಲನ್ ಆಗಿ ಅಭಿನಯಿಸಿದ್ದಾರೆ. ಪ್ರಿಯಾಮಣಿ, ಸನ್ಯಾ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭಾಗವಾಗಿ ಚಿತ್ರದ ಹಾಡುಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಅಲ್ಲದೇ ಈಗಾಗಲೇ ಟ್ರೈಲರ್ ಕಟ್ ಪ್ರಿವ್ಯೂ ಆಗಿ ರಿಲೀಸ್ ಮಾಡಿರುವ ಮೇಕರ್ಸ್ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಅಪ್ಪ-ಮಗನಾಗಿ ಕಾಣಿಸಿದ್ದು, ಕೈದಿ, ಜವಾನ್ ನೆಗೆಟಿವ್ ಪಾತ್ರದಲ್ಲಿ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಕಥೆ ದೇಶಕ್ಕಾಗಿ ಪ್ರಾಣ ಕೊಡುವ ಯೋಧನದ್ದು ಎಂಬುದು ಟ್ರೇಲರ್ ನೋಡಿದರೆ ಅರ್ಥವಾಗುತ್ತದೆ.
ಶಾರುಖ್ ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಮಹತ್ವಾಕಾಂಕ್ಷೆಯಿಂದ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ತಮಿಳಿನ ಸ್ಟಾರ್ ಹೀರೋ ವಿಜಯ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಇದುವರೆಗೂ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಚಿತ್ರವು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ.