ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಂಧೀಜಿ ಅವರನ್ನು ಕೊಂದ ಮನಸ್ಥಿತಿಯವರೇ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ಗೌರಿನೆನಪು (Gauri Nenapu) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗೌರಿ ಅನೇಕ ಬಾರಿ ಭೇಟಿಯಾಗಿದ್ದರು. ಆದ್ರೆ ಗೌರಿ ಲಂಕೇಶ್ ಯಾವತ್ತೂ ವೈಯಕ್ತಿಕ ಸಹಾಯ ಕೇಳಲಿಲ್ಲ. ಸಾಮಾಜಿಕ ಸಮಸ್ಯೆಗಳ ಬಗ್ಗೆ ನನ್ನ ಬಳಿ ಚರ್ಚೆ ಮಾಡುತ್ತಿದ್ದರು. ಕೋಮುವಾದಿಗಳೇ ಪತ್ರಕರ್ತೆ ಗೌರಿ ಲಂಕೇಶ್ರನ್ನು ಹತ್ಯೆ ಮಾಡಿದರು. ಕೋಮುವಾದಿಗಳಿಗೆ ಹಿಂದುಗಳು ಹಾಗೂ ಮುಸ್ಲಿಂ ಒಟ್ಟಾಗಿ ಇರುವುದು ಇಷ್ಟವಿಲ್ಲ. ಕೋಮುವಾದಿಗಳು ಬೆದರಿಕೆ ಪತ್ರ ಬರೆಯುತ್ತಾರೆ. ಭಯಪಡಬೇಡಿ, ಕೋಮುವಾದ ವಿರುದ್ಧ ಹೋರಾಟ ಮಾಡೋಣ ಎಂದು ಹೇಳಿದರು.
ಸಾಹಿತಿಗಳು, ಕವಿಗಳು, ಚಿಂತಕರಿಗೆ ಬೆದರಿಕೆ ಪತ್ರ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಬೆದರಿಕೆ ಪತ್ರ, ಬೆದರಿಕೆ ಕರೆಗಳ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದೇನೆ. ಅದೇ ರೀತಿ, ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದೇನೆ. ಮೈಸೂರಿನಲ್ಲಿ ಇದಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ಒಂದು ಕಚೇರಿಯನ್ನೇ ತೆರೆದಿದ್ದೇವೆ. ಗೌರಿ ಲಂಕೇಶ್ ಹತ್ಯೆ ಕುರಿತಾಗಿ 1 ಸಾವಿರ ಪುಟದ ಚಾರ್ಜ್ ಶೀಟ್ ದಾಖಲಾಗಿದೆ. ಪ್ರಾಮಾಣಿಕ ತನಿಖೆಯಾಗಿದೆ, ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. 80 ಜನರ ಸಾಕ್ಷಿಯಾಗಿದೆ, ನಾನು ಖುದ್ದು ಮುತುವರ್ಜಿ ವಹಿಸಿ ಈ ಪ್ರಕರಣವನ್ನು ನೋಡುತ್ತಿದ್ದೇನೆ. ಗೌರಿ ಲಂಕೇಶ್ ಅಭಿಮಾನಿಗಳಿಗೆ ಸಮಾಧಾನ ತರುವ ರೀತಿಯ ಶಿಕ್ಷೆ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.