ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಬಲಿ ಪಡೆದಿದ್ದ ಕಾಡಾನೆ ಸೆರೆ

ಹೊಸ ದಿಗಂತ ವರದಿ, ಮಡಿಕೇರಿ/ ಸುಂಟಿಕೊಪ್ಪ:

ಕೆದಕಲ್ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಉಪಟಳ ನೀಡುವುದರೊಂದಿಗೆ, ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಬಲಿ ತೆಗೆದುಕೊಂಡ ಹಾಗೂ ಮತ್ತೊಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಸೋಮವಾರ ಕೆಲಸಕ್ಕೆಂದು ಕೆದಕಲ್ ಗ್ರಾಮದ ಆಮದ ಡಿ ಬ್ಲಾಕ್’ಗೆ ಬೈಕ್’ನಲ್ಲಿ ತೆರಳುತ್ತಿದ್ದ ಸುಂಟಿಕೊಪ್ಪದ ನಿವಾಸಿ ಮುರುಗೇಶ್ ಎಂಬವರ ಮೇಲೆ ದಾಳಿ ನಡೆಸಿದ್ದ ಕಾಡಾನೆ ಅವರ ಬೈಕ್’ನ್ನು ಜಖಂಗೊಳಿಸಿತ್ತಲ್ಲದೆ, ಅವರನ್ನು ಗಂಭೀರವಾಗಿ ಗಾಯಗೊಳಿಸಿತ್ತು.

ವಿಷಯವರಿತ ಅರಣ್ಯ ಇಲಾಖೆ, ಆ ಕಾಡಾನೆಯನ್ನು ಮರಳಿ ಕಾಡಿಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಕ್ಷಿಪ್ರ ಕಾರ್ಯ ಪಡೆ( ಆರ್.ಆರ್.ಟಿ)ಯ ಸಿಬ್ಬಂದಿ ಗಿರೀಶ್ ಎಂಬವರ ಮೇಲೆ ದಾಳಿ ನಡೆಸಿ ಅವರನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಸು ನೀಗಿದ್ದರು.

ಮಂಗಳವಾರ ಅರಣ್ಯ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಶಾಸಕ ಡಾ. ಮಂಥರ್ ಗೌಡ ಅವರು ಸಾರ್ವಜನಿಕರಿಗೆ ಉಪಟಳ ನೀಡುವ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು.

ಅದರಂತೆ ಮಂಗಳವಾರ ಬೆಳಗ್ಗಿನಿಂದಲೇ ಅರಣ್ಯ ಇಲಾಖೆಯು ತಂಡವನ್ನು ರಚಿಸಿ ಐದು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿತ್ತು. ಮಳೆಯನ್ನೂ ಲೆಕ್ಕಿಸದೆ ಕಾರ್ಯಾಚರಣೆ ತಂಡ ಮಂಗಳವಾರ ಕಾಡಾನೆಯನ್ನು ಹಿಡಿಯಲು ಪ್ರಯತ್ನಿಸಿದ್ದರೂ ತಂಡಕ್ಕೆ ಇದರ ಸುಳಿವು ದೊರೆಯಲಿಲ್ಲ.
ಬುಧವಾರ ಕೂಡಾ ಸಾಕಷ್ಟು ಆಟವಾಡಿಸಿದ ಕಾಡಾನೆಯನ್ನು ಮಧ್ಯಾಹ್ನದ ವೇಳೆಗೆ ಸೆರೆ ಹಿಡಿಯುವಲ್ಲಿ ಕಾರ್ಯಾಚರಣೆ ತಂಡ ಯಶಸ್ವಿಯಾಗಿದೆ.
ತೋಟದಿಂದ ತೋಟಕ್ಕೆ ಅಲೆಯುತ್ತಿದ್ದ ಕಾಡಾನೆಯನ್ನು ಸಿ.ಪಿ.ಪ್ರದಾನ್ ಎಂಬವರ ತೋಟದ ಮುಖ್ಯ ರಸ್ತೆಯ ಸಮೀಪದಲ್ಲೇ ಸೆರೆ ಹಿಡಿಯಲಾಗಿದೆ.

ಈಗಾಗಲೇ ವರದಿಯಾಗಿರುವಂತೆ ಕೆದಕಲ್ ಭಾಗದಲ್ಲಿ ಹಾಡಹಗಲೇ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ದಿನ ನಿತ್ಯ ಶಾಲೆಗೆ ಮತ್ತು ಕೆಲಸಕ್ಕೆ ಹೋಗುವವರು ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರ್‌ ಆರ್ ಟಿ ತಂಡದ ಗಿರೀಶ್ ಅವರನ್ನು ಬಲಿ ಪಡೆದ ಕಾಡಾನೆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್, ಡಿಆರ್ ಎಫ್ ಒಗಳಾದ ರಂಜನ್ ಮತ್ತು ದೇವಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಕಾಡಾನೆಗೆ ಅರವಳಿಕೆಯ ಚುಚ್ಚುಮದ್ದನ್ನು ಡಿಆರ್ ಎಫ್ ಓ ರಂಜನ್ ನೀಡಿದ್ದು, 20 ವರ್ಷ ಪ್ರಾಯದ ಈ ಗಂಡಾನೆಯನ್ನು ಲಾರಿಯ ಮೂಲಕ ದುಬಾರೆಗೆ ಸಾಗಿಸಲಾಯಿತು. ಲಾರಿಯ ಮೇಲೆ ಕಬ್ಬಿಣದ ಪಂಜರದೊಳಗೆ ನಿಂತಿದ್ದ ಈ ಆನೆಯನ್ನು ಜನರು ದಾರಿಯುದ್ದಕ್ಕೂ ಕುತೂಹಲಭರಿತವಾಗಿ ವೀಕ್ಷಿಸುತ್ತಿದ್ದುದು ಕಂಡುಬಂದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!