ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ರಾಜಾರೋಷವಾಗಿರುವ ಮೋಸದ ಮತಾಂತರ ಪಿಡುಗಿಗೆ ಕಡಿವಾಣ ಹಾಕಲು, ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶವೀಯಬೇಕೆಂಬ ಆಗ್ರಹಯುಕ್ತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ಈ ಗೊಂದಲದಲ್ಲಿ ಕೋರ್ಟ್ ಯಾಕೆ ತಲೆ ಹಾಕಬೇಕು ಮತ್ತು ಸರಕಾರಕ್ಕೆ ಈ ವಿಚಾರದಲ್ಲಿ ಆದೇಶ ನೀಡುವುದಾದರು ಯಾವ ತೆರ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾರನ್ನು ಒಳಗೊಂಡ ನ್ಯಾಯಪೀಠ ಅರ್ಜಿದಾರರನ್ನೇ ಪ್ರಶ್ನಿಸಿದೆ. ಹಿಂದುಗಳು ಮತ್ತು ಇತರ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ವಂಚನೆಯಿಂದ, ಹೆದರಿಸಿ ಬೆದರಿಸಿ ಮತಾಂತರಿಸಲಾಗುತ್ತಿದೆ ಎಂದು ಅರ್ಜಿದಾರರಾದ ಕರ್ನಾಟಕದ ಜೆರೋಮ್ ಆಂಟೋ ನ್ಯಾಯಾಲಯಕ್ಕೆ ಅರಿಕೆ ಮಾಡಿದ್ದರು.
ಚಿತ್ರಹಿಂಸೆ ಆಗಿದ್ರೆ ಹೇಳಿ
ಮೋಸದ ಮತಾಂತರಗಳಿಂದ ಯಾರಿಗಾದರೂ ಚಿತ್ರಹಿಂಸೆ ಆಗಿದ್ದಲ್ಲಿ ನ್ಯಾಯಾಲಯ ಅಗತ್ಯವಾಗಿ ಪರಾಮರ್ಶಿಸುವುದು ಎಂದು ನ್ಯಾಯಪೀಠ ಹೇಳಿತು ಮತ್ತು ಪಿಐಎಲ್‌ನ್ನು ತಿರಸ್ಕರಿಸಿತು. ಹಾಗಿದ್ದಲ್ಲಿ, ಇಂತಹ ದೂರುಗಳಿರುವ ಅರ್ಜಿದಾರ ಎಲ್ಲಿ ಗೆ ಹೋಗಬೇಕೆಂದು ಅರ್ಜಿದಾರರ ಪ್ರಶ್ನೆಗೆ, ಸಲಹಾ ವ್ಯಾಪ್ತಿ ನಮ್ಮದಲ್ಲ ಎಂದು ಪೀಠ ಪ್ರತಿಕ್ರಿಯಿಸಿತು.
ವಕೀಲ ಭರ್ತಿ ತ್ಯಾಗಿ ಮುಖೇನ ಸಲ್ಲಿಸಲಾಗಿದ್ದ ಪಿಐಎಲ್‌ನಲ್ಲಿ ,ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯಗಳನ್ನು ಪ್ರತಿವಾದಿಗಳಾಗಿ ಗುರುತಿಸಲಾಗಿತ್ತು. ಹಣ ಅಥವಾ ವಸ್ತುಗಳ ಆಮಿಷವೊಡ್ಡಿ , ಬೆದರಿಕೆಯೊಡ್ಡಿ ಮತ್ತು ಬಲವಂತವಾಗಿ ಜನರನ್ನು ಇನ್ನೊಂದು ಮತಕ್ಕೆ ಮತಾಂತರಿಸುವುದು ಸಂವಿಧಾನದ 14, 21ಮತ್ತು 25ನೇ ವಿಧಿಗಳಡಿ ಅಪರಾಧವೆಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಸಂವಿಧಾನದ 14, 21ಮತ್ತು 25ನೇ ವಿಗಳ ಬಲದಲ್ಲಿ, ಮೋಸದ ಮತಾಂತರ ನಿಯಂತ್ರಣಕ್ಕೆ ಮಸೂದೆ ಮಂಡಿಸಬೇಕು ಅಥವಾ ಮೋಸದ ಮತಾಂತರಗಳ ಬಗ್ಗೆ ವರದಿಯೊಂದನ್ನು ತಯಾರಿಸುವಂತೆ ಕಾನೂನು ಆಯೋಗಕ್ಕೆ ನ್ಯಾಯಾಲಯ ನಿರ್ದೇಶವೀಯಬೇಕೆಂದೂ ಅರ್ಜಿದಾರರು ಆಗ್ರಹಿಸಿದ್ದಾರೆ.