ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಿದೆ. 15 ಆಟಗಾರರ ಈ ಬಳಗಕ್ಕೆ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ಅವರನ್ನು ಮತ್ತೆ ನಾಯಕನಾಗಿ ನೇಮಿಸಲಾಗಿದೆ.
ಸರಣಿಯ ಆರಂಭದಲ್ಲಿ ಸ್ಮಿತ್ ನಾಯಕತ್ವ ವಹಿಸಿದ್ದರೆ, ಗಾಯದಿಂದ ಚೇತರಿಸಿಕೊಂಡ ಪ್ಯಾಟ್ ಕಮಿನ್ಸ್ ಮೂರನೇ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ಇದೀಗ ಕೊನೆಯ ಹಂತದಲ್ಲಿ ಕಮಿನ್ಸ್ ತಂಡದಿಂದ ಹೊರಗುಳಿದಿದ್ದಾರೆ.
ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದ್ದ ಕಮಿನ್ಸ್ ಮೂರನೇ ಟೆಸ್ಟ್‌ನಲ್ಲಿ ಮರಳಿದ್ದರೂ, ಆಸ್ಟ್ರೇಲಿಯಾ ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ವಿಶ್ರಾಂತಿ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಇದೇ ಕಾರಣಕ್ಕೆ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಅವರು ಕಣಕ್ಕಿಳಿಯಲಿಲ್ಲ. ಕಮಿನ್ಸ್ ಜತೆಗೆ ಹಿರಿಯ ಸ್ಪಿನ್ನರ್ ನಾಥನ್ ಲಿಯಾನ್ ಕೂಡ ತಂಡದಿಂದ ಹೊರಗುಳಿದಿದ್ದಾರೆ.
ಈ ಇಬ್ಬರ ಬದಲಿಗೆ ಟಾಡ್ ಮರ್ಫಿ ಮತ್ತು ಜ್ಯೆ ರಿಚರ್ಡ್ಸನ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಸ್ಕ್ವಾಡ್‌ನಲ್ಲಿ ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್ ಸೇರಿದಂತೆ ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ. ನಾಲ್ಕನೇ ಟೆಸ್ಟ್ ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿದ್ದು, ಅಂತಿಮ ಟೆಸ್ಟ್ ಜನವರಿ 4ರಿಂದ ಸಿಡ್ನಿಯಲ್ಲಿ ನಡೆಯಲಿದೆ.

