ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ (BJP) ಜೊತೆ ಜೆಡಿಎಸ್ (JDS) ಮೈತ್ರಿ ಮಾತುಕತೆ ಕುರಿತು ತೀರ್ಮಾನಗಳು ಆಗುತ್ತಿದ್ದು, ಇದರ ಮದ್ಯೆ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ದಳ ನಾಯಕರು ಕಣ್ಣಿದ್ದಾರೆ.
ಜೆಡಿಎಸ್ ವರಿಷ್ಠರು ಮಂಡ್ಯವನ್ನು ಬಿಟ್ಟುಕೊಡುವಂತೆ ಬಿಜೆಪಿ ಹೈಕಮಾಂಡ್ ಎದುರು ಪ್ರಸ್ತಾವನೆ ಇಟ್ಟಿದ್ದಾರೆ. ಒಂದು ವೇಳೆ ಬಿಜೆಪಿ ಏನಾದ್ರೂ ಮಂಡ್ಯ ಬಿಟ್ಟುಕೊಟ್ಟರೇ ಸದ್ಯದ ಕ್ಷೇತ್ರ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅತಂತ್ರ ಆಗುತ್ತಾರೆ ಎಂಬ ಮಾತುಗಳು ಕೇಳಿಬುರತ್ತಿದೆ.
ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿದ್ದು, ಯಾರು ಹೇಳಿದ್ದಾರೆ, ಸೀಟು ಹಂಚಿಕೆ ಬಗ್ಗೆ ಚರ್ಚೆಯೇ ಆಗಿಲ್ಲ. ಇವೆಲ್ಲವೂ ಪ್ರಾಥಮಿಕ ಅಂತ ನಿನ್ನೆಯೇ (ಶನಿವಾರ) ನಾನು ಹೇಳಿದ್ದೇನೆ. ಅವರು ಅತಂತ್ರ ಆಗ್ತಾರೆ ಅಂತಾ ಏಕೆ ಪ್ರಚಾರ ಮಾಡುತ್ತಿದ್ದೀರಿ ? ಚರ್ಚೆನೇ ಆಗದೇ ಏಕೆ ಹೀಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ನಾನು ಮೊದಲು ರಾಜ್ಯದ ರೈತರ ಸಮಸ್ಯೆ ಬಗೆಹರಿಸಬೇಕು. ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ರೈತರು ಈಗ ಸಂಕಷ್ಟದಲ್ಲಿ ಇದ್ದಾರೆ. ರೈತರ ಪರಿಸ್ಥಿತಿ ಏನಾಗಿದೆ? ನಂಗೆ ಅದರ ಬಗ್ಗೆ ಚಿಂತೆಯಾಗಿದೆ. ಇಲ್ಲಿ ಯಾರು ಅತಂತ್ರ ಅನ್ನೋದು ಪ್ರಶ್ನೆಯಲ್ಲ ಎಂದು ಸಿಡಿಮಿಡಿಗೊಂಡರು.
ಬಿಜೆಪಿ, ಜೆಡಿಎಸ್ ಮೈತ್ರಿ ಸಿದ್ಧಾಂತ ವಿರೋಧವಾದದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಸಿದ್ಧಾಂತಕ್ಕೂ, ಜನರ ಭಾವನೆಗಳ ಬದುಕಿಗೂ ತುಂಬಾ ವ್ಯತ್ಯಾಸವಿದೆ. ಸಿದ್ಧಾಂತ ಒಂದು ಭಾಗ, ಜನರ ಬದುಕು ಬೇರೆ. ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಯಾರ ಬಗ್ಗೆ ಮಾತನಾಡಿದರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.