ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ವಿರುದ್ಧ ಖಾಸಗಿ ಸಂಘಟನೆಗಳು ಕರೆ ಕೊಟ್ಟಿರುವ ಬೆಂಗಳೂರು ಬಂದ್ ಹಿಂಸಾತ್ಮಕ ರೂಪ ಪಡೆದುಕೊಡಿದೆ. ಇಂದು ಯಾವುದೇ ಆಟೋ, ಟ್ಯಾಕ್ಸಿ ರೋಡಿಗಿಳಿಯಬಾರದು ಎಂದು ಸೂಚಿಸಲಾಗಿತ್ತು. ಆದರೂ ಕೆಲವರು ಬಾಡಿಗೆ ಹೊಡೆಯುತ್ತಿದ್ದು, ರಸ್ತೆಗೆ ಬಂದ ಆಟೋ ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಟೈರ್‌ಗಳ ಗಾಳಿ ತೆಗೆದು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಕೆಲವೆಡೆ ಖಾಸಗಿ ಸಾರಿಗೆ ಒಕ್ಕೂಟದವರು ಚಾಲಕರ ಮೇಲೆ ಹಲ್ಲೆ ನಡೆಸಿದ ಘಟನೆಗಳೂ ವರದಿಯಾಗಿವೆ. ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ ಹೋಗುತ್ತಿದ್ದ ರಾಪಿಡೊ ಚಾಲಕ ಮತ್ತು ಹಿಂಬದಿ ಸವಾರನ ಮೇಲೆ ಹಲ್ಲೆ ನಡೆದಿದೆ. ಕ್ಯಾಬ್ ಚಾಲಕರು ಬೈಕ್ ಕೆಳಗೆ ಬೀಳಿಸಿ ಚಾಲಕನನ್ನು ಅಟ್ಟಾಡಿಸಿ ಹೊಡೆದಿದ್ದಾರೆ.
ಹಾಗೆಯೇ ಗಾಂಧಿನಗರದಲ್ಲಿ ಬಾಡಿಗೆ ಹೋಗುತ್ತಿದ್ದ ಕ್ಯಾಬ್ ಚಾಲಕನ ಕಾರು ತಡೆದು ಕೀ ಕಿತ್ತುಕೊಂಡಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಾಲಕನನ್ನು ಬಚಾವ್ ಮಾಡಿದ್ದಾರೆ. ಇನ್ನೂ ಖಾಸಗಿ ಒಕ್ಕೂಟದವರೇ ರಾಪಿಡೋಗಳನ್ನು ಬುಕ್ ಮಾಡಿ ತಾವಿರುವ ಸ್ಥಳಕ್ಕೆ ಕರೆಸಿ ಹಲ್ಲೆ ಬೈಕ್ ಸವಾರನ ಮೇಲೆ ದರ್ಪ ಮರೆದಿದ್ದಾರೆ. ಸುಜಾತಾ ಥಿಯೇಟರ್ ಬಳಿ ಗೂಡ್ಸ್ ಗಾಡಿಗಳ ಟೈರ್‌ನ ಗಾಳಿ ತೆಗೆದು ಆಕ್ರೋಶ ಹೊರ ಹಾಕಿದರು.