ಹೊಸದಿಗಂತ ವರದಿ, ಅಂಕೋಲಾ:
ಪಟ್ಟಣದ ಅಂಬಾರಕೊಡ್ಲ ಕ್ರಾಸ್ ರೆಡಿಮೇಡ್ ಬಟ್ಟೆಗಳ ಮಾರಾಟದ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ರವಿವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಹೊನ್ನಿಕೇರಿಯ ವ್ಯಕ್ತಿಯೋರ್ವರಿಗೆ ಸೇರಿದ ರೊಯ್ ಫ್ಯಾಷನ್ ರೆಡಿಮೇಡ್ ಬಟ್ಟೆ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು ಅಂಗಡಿಯ ಮೇಲ್ಛಾವಣಿ, ಪೀಠೋಕರಣಗಳು, ಗಣೇಶ ಚತುರ್ಥಿ ಸಂದರ್ಭದಲ್ಲಿ ವ್ಯಾಪಾರಕ್ಕೆಂದು ಇತ್ತೀಚೆಗೆ ಖರೀದಿಸಿ ತರಲಾಗಿದ್ದ ಬಟ್ಟೆ ಮತ್ತಿತರ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸತತ ಎರಡು ಗಂಟೆಗಳಿಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿ ಹರಸಾಹಸ ಪಟ್ಟು ಬೆಂಕಿ ಆರಿಸುವ ಕೆಲಸ ಮಾಡಿದರು.
ಈ ಅಂಗಡಿಯ ಅಕ್ಕ ಪಕ್ಕ ಮೊಬೈಲ್ ಸರ್ವಿಸ್ ಅಂಗಡಿ, ಬೇಕರಿ,ಜೆರಾಕ್ಸ್ ಅಂಗಡಿ ಸೇರಿದಂತೆ
ಹತ್ತಾರು ಅಂಗಡಿಗಳಿದ್ದು ಬೆಂಕಿ ಇತರ ಅಂಗಡಿಗಳಿಗೂ ವ್ಯಾಪಿಸುವ ಸಾಧ್ಯತೆ ಕಂಡು ಬಂದಿತ್ತಾದರೂ ಅಗ್ನಿ ಶಾಮಕ ಸಿಬ್ಬಂದಿಗಳು, ಸ್ಥಳೀಯ ಕೆಲವು ಯುವಕರು ಸೇರಿ ಹೆಚ್ಚಿನ ಅನಾಹುತ ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.
ಅಂಕೋಲಾ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಮತ್ತು ಸಿಬ್ಬಂದಿಗಳು, ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಗ್ನಿ ಅನಾಹುತದಿಂದ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು ಹಾನಿಯ ನಿಖರ ಮಾಹಿತಿ ತಿಳಿದು ಬರಬೇಕಿದೆ.