Tuesday, December 23, 2025

ಹೆಂಡತಿಗೆ ಮಕ್ಕಳನ್ನು ಕೊಡಲು ಇಷ್ಟವಿಲ್ಲದೇ ಇಡೀ ಕುಟುಂಬಕ್ಕೆ ವಿಷ ಹಾಕಿದ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳನ್ನು ಪತ್ನಿ ಜೊತೆ ಬಿಡಲು ಕೋರ್ಟ್ ಆದೇಶಿಸಿದ್ದಕ್ಕೆ ತನ್ನ ಎರಡು ಮಕ್ಕಳಿಗೆ ವಿಷವುಣಿಸಿ ನಂತರ ತಂದೆ ತಾಯಿಯ ಜೊತೆ ತಾನು ನೇಣಿಗೆ ಶರಣಾಗಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ರಾಮಂತಳಿಯಲ್ಲಿ ನಡೆದಿದೆ.

ಮಗಳು ಹಿಮಾ(6), ಪುತ್ರ ಕಣ್ಣನ್‌ಗೆ(2) ವಿಷ ನೀಡಿ, ಬಳಿಕ ತಾಯಿ ಉಷಾ(65) ಜೊತೆಗೆ ಕಲಾಧರನ್(36) ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ರಾಮಂತಳಿಯ ಸೆಂಟ್ರಲ್ ನಿವಾಸಿಯಾಗಿದ್ದ ಕಲಾಧರನ್ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. 

ಸೋಮವಾರ (ಡಿ.22) ರಾತ್ರಿ ಈ ಘಟನೆ ನಡೆದಿದೆ. ಪತಿ ಕಲಾಧರನ್ ಹಾಗೂ ಆತನ ಪತ್ನಿ ಜೊತೆಗಿರಲಿಲ್ಲ. ದಂಪತಿಯ ಎರಡು ಮಕ್ಕಳು ಕಲಾಧರನ್ ಜೊತೆಗಿದ್ದರು. ಈ ಕುರಿತ ಕೇಸ್ ಕೋರ್ಟ್‌ನಲ್ಲಿ ಬಾಕಿಯಿತ್ತು. ಇತ್ತೀಚಿಗಷ್ಟೇ ಕೋರ್ಟ್ ಆದೇಶ ಹೊರಡಿಸಿ, ಮಕ್ಕಳನ್ನು ಪತ್ನಿಯ ಸುಪರ್ದಿಗೆ ನೀಡಬೇಕೆಂದು ತಿಳಿಸಿತ್ತು. ಕೋರ್ಟ್ ತೀರ್ಪಿನ ಬಳಿಕ ಮಕ್ಕಳನ್ನು ತಕ್ಷಣ ತಮ್ಮ ಸುಪರ್ದಿಗೆ ನೀಡಬೇಕೆಂದು ಪತ್ನಿ ಪೊಲೀಸರನ್ನು ಭೇಟಿಯಾಗಿದ್ದರು. ಅದರಂತೆ ಇಂದು (ಡಿ.23) ಮಕಳನ್ನು ಪತ್ನಿಯ ವಶಕ್ಕೆ ಕೊಡುವಂತೆ ಕಲಾಧರನ್ ತಂದೆ ಉಣ್ಣಿಕೃಷ್ಣನ್‌ಗೆ ಪೊಲೀಸರು ಫೋನ್ ಮಾಡಿ ತಿಳಿಸಿದ್ದರು.

ಕೋರ್ಟ್ನ ಆದೇಶ ಕಲಾಧರನ್‌ಗೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ತನ್ನ ಎರಡು ಮಕ್ಕಳಿಗೂ ವಿಷವುಣಿಸಿ, ಬಳಿಕ ತಾಯಿಯ ಜೊತೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ತಂದೆ ಉಣ್ಣಿಕೃಷ್ಣನ್ ರಾತ್ರಿ ಮನೆಗೆ ಬಂದಾಗ ಎಷ್ಟು ಕೂಗಿದರೂ ಯಾರು ಬಾಗಿಲು ತೆರೆಯಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ಬಾಗಿಲು ತೆಗೆದ ಬಳಿಕ ಪ್ರಕರಣ ಬಯಲಾಗಿದೆ.

ಪ್ರಕರಣದ ಕುರಿತು ರಾಮಂತಳಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!