Tuesday, December 23, 2025

ಪೋರ್ಜರಿ ದಾಖಲೆ ಸೃಷ್ಟಿಸಿ ಪಶ್ಚಿಮ ಬಂಗಾಳದ ವ್ಯಕ್ತಿಗೆ ಪಾಸ್‌ಪೋರ್ಟ್: ಪೊಲೀಸ್ ಸಿಬ್ಬಂದಿಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪರಿಸರದಲ್ಲಿ ಯಾವುದೇ ಸ್ಥಳೀಯ ದಾಖಲೆಗಳಿಲ್ಲದೆ ವಾಸವಾಗಿದ್ದ ಪಶ್ಚಿಮ ಬಂಗಾಳದ ಶಕ್ತಿ ದಾಸ್ ಎಂಬ ವ್ಯಕ್ತಿಗೆ ವಿದೇಶಕ್ಕೆ ತೆರಳಲು ಬೇಕಾದ ಪಾಸ್‌ಪೋರ್ಟ್ ಹಾಗೂ ಪೊಲೀಸ್ ವೆರಿಫಿಕೇಷನ್‌ಗೆ ಪೋರ್ಜರಿ ದಾಖಲೆ ಸೃಷ್ಟಿಸಿದ ಆರೋಪದಲ್ಲಿ ವಿಟ್ಲ ಠಾಣೆಯ ಪೊಲೀಸ್ ಸಿಬ್ಬಂದಿ ಗದಗ ಮೂಲದ ಪ್ರದೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ಸಂದರ್ಭ ಶಕ್ತಿದಾಸ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

2019ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆ ಗೊಂಡಿದ್ದ ಪ್ರದೀಪ್, ಕಳೆದ ಮೂರು ವರ್ಷಗಳಿಂದ ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಇದಕ್ಕೂ ಮೊದಲು ಆತ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಕೆಲಸ ನಿರ್ವಹಿಸಿದ್ದ.

ವಿಟ್ಲ ಆಸುಪಾಸಿನಲ್ಲಿ ವಾಸವಾಗಿದ್ದ ಶಕ್ತಿ ದಾಸ್ ಎಂಬಾತ 2025 ಫೆಬ್ರವರಿಯಲ್ಲಿ ಪಾಸ್ ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪೊಲೀಸ್ ವೆರಿಫಿಕೇಶನ್ ಸಂದರ್ಭ ವಿಳಾಸ ತಾಳೆಯಾಗದ ಕಾರಣಕ್ಕೆ ತಿರಸ್ಕೃತಗೊಂಡಿತ್ತು. ಜೂನ್‌ನಲ್ಲಿ ಮರು ಅರ್ಜಿ ಸಲ್ಲಿಸಿದ್ದು, ಕನ್ಯಾನ ಪರಿಸರದಲ್ಲಿ ಬೀಟ್ ನೋಡುತ್ತಿದ್ದ ಪ್ರದೀಪ್, ಶಕ್ತಿದಾಸ್‌ನ ವಿಳಾಸದ ಬೀಟ್ ಸಿಬ್ಬಂದಿಯ ಅರಿವಿಗೆ ಬಾರದಂತೆ, ವರದಿ ತಯಾರಿಸಿ, ಬೀಟ್ ಸಿಬ್ಬಂದಿಯ ಸಹಿಯನ್ನು ಫೋರ್ಜರಿ ಮಾಡಿ, ಮೇಲಾಧಿಕಾರಿಯವರಿಂದ ಶಿಫಾರಸ್ಸು ಮಾಡಿಸಿ ಕಳುಹಿಸಿ, ಪಾಸ್ ಪೋರ್ಟ್ ಪಡೆದುಕೊಳ್ಳಲು ಸಹಕರಿಸಿದ್ದ. ಪರಿಶೀಲನಾ ದಾಖಲೆಗಳನ್ನು ಯಾರಿಗೂ ಗೊತ್ತಾಗಬಾರದೆಂದು ನಾಶಪಡಿಸಿದ್ದ. ವಿದೇಶಕ್ಕೆ ತೆರಳಲು ಬೇಕಾದ ಪೊಲೀಸ್ ಕ್ಲೀಯರೆನ್ಸ್ ಸರ್ಟಿಫಿಕೇಟ್ ಮಾಡುವ ಸಂದರ್ಭವೂ ಇದೇ ಕೃತ್ಯವನ್ನು ಎಸಗಲಾಗಿತ್ತು.

ಇದೀಗ ದಾಸ್ ಎಂಬ ಹೆಸರು ಗಮನಿಸಿ ಡಿ.19ರಂದು ದಾಖಲೆಯನ್ನು ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಬಂಽತ ಪೊಲೀಸ್ ಸಿಬ್ಬಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

error: Content is protected !!