June 27, 2026
Saturday, June 27, 2026
spot_img

ಕೊಣಾಜೆಯ ಯುವಕ ನಾಪತ್ತೆ ಪ್ರಕರಣಕ್ಕೆ ದುಃಖಾಂತ್ಯ: ದೇವಳ ಪರಿಸರದಲ್ಲಿ ಕೊಳೆತ ಸ್ಥಿತಿಯ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಸೋಮವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿ ಬಳಿಕ ನಿಗೂಢ ನಾಪತ್ತೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯ ಯುವಕನ ಶವವು ಕೊಳೆತ ಸ್ಥಿತಿಯಲ್ಲಿ ಸೋಮೇಶ್ವರದ ಶ್ರೀ ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.

ಪತ್ನಿಯಿಂದ ವಿಚ್ಚೇದನಗೊಂಡ ಖಿನ್ನತೆಯಲ್ಲಿ ಯುವಕ ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿಯ ನಿವಾಸಿ ‌ದಿನೇಶ್ ಶೆಟ್ಟಿಗಾರ್ ಎಂಬವರ ಪುತ್ರ ವಿವೇಕ್ ಶೆಟ್ಟಿಗಾರ್ ( 32)ಮೃತ ವ್ಯಕ್ತಿಯಾಗಿದ್ದಾನೆ.

ಮಂಗಳೂರಿನ ಕದ್ರಿಯ ವೇದ ಮೋಟಾರ್ಸ್ ನಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಅಂದು ರಾತ್ರಿ 9 ಗಂಟೆಯ ಸುಮಾರಿಗೆ ತಾಯಿಗೆ ಫೋನ್ ಮಾಡಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದರೆನ್ನಲಾಗಿದೆ. ಮಧ್ಯರಾತ್ರಿ 12 ಗಂಟೆಯಾದರೂ ಮಗ ಮನೆಗೆ ವಾಪಸ್ಸು ಬರದೇ ಇದ್ದ ಕಾರಣ ತಾಯಿ ಪೋನ್ ಮಾಡಿದ್ದು, ವಿವೇಕ್ ಕರೆಯನ್ನ ಸ್ವೀಕರಿಸಿರಲಿಲ್ಲ. ವಿವೇಕ್ ಮಂಗಳವಾರವೂ ಮನೆಗೂ ಬಾರದೆ,‌ ಮೊಬೈಲ್ ಕರೆಯನ್ನು ಸ್ವೀಕರಿಸದೇ ಇದ್ದಾಗ ಗಾಬರಿಗೊಂಡ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದು, ಕೊನೆಗೆ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ವಿವೇಕ್ ಅವರ ದ್ವಿಚಕ್ರ ವಾಹನದ ಜೊತೆ ಪಾದರಕ್ಷೆಗಳು ಮಂಗಳವಾರ ಬೆಳಿಗ್ಗೆ ಸೋಮೇಶ್ವರ ಕಡಲಕಿನಾರೆಯಲ್ಲಿ ಪತ್ತೆಯಾಗಿತ್ತು.

ಮೃತ ವಿವೇಕ್ ತಂದೆ, ತಾಯಿ ಮತ್ತು ಏಕೈಕ ಸಹೋದರಿಯನ್ನು ಅಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !