ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ಭಕ್ತರಿಗೆ ಚಿರತೆಗಳ ಕಾಟ ಇನ್ನೂ ಕಡಿಮೆಯಾಗಿಲ್ಲ. ವಾರಕ್ಕೊಂದರಂತೆ ಚಿರತೆಗಳು ನಡಿಗೆ ದಾರಿಯಲ್ಲಿ ಬೋನಿಗೆ ಸೆರೆಸಿಕ್ಕುತ್ತಲೇ ಇವೆ. ಇಂದು ಮುಂಜಾನೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿದೆ. ಲಕ್ಷಿತಾ ಮೇಲೆ ದಾಳಿ ಮಾಡಿದ ಜಾಗದಲ್ಲಿಯೇ ಚಿರತೆ ಬೋನಿಗೆ ಸಿಕ್ಕಿ ಹಾಕಿಕೊಂಡಿದೆ. ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಚರತೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ತಿರುಮಲ ಪಾದಚಾರಿ ಮಾರ್ಗದಲ್ಲಿ ಬೋನಿನಲ್ಲಿ ಸಿಕ್ಕಿಬಿದ್ದಿರುವ ಚಿರತೆಗಳ ಸಂಖ್ಯೆ ಆರಕ್ಕೇರಿದೆ.
ಮೃಗಾಲಯಕ್ಕೆ ಚಿರತೆಯನ್ನು ಕಳಿಸಿಕೊಡಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ. ಸಾಲು ಸಾಲು ಚಿರತೆಗಳು ಸಿಕ್ಕಿ ಬೀಳುತ್ತಿರುವ ಹಿನ್ನೆಲೆಯಲ್ಲಿ ತಿರುಮಲ ಬೆಟ್ಟದ ಮೇಲೆ ನಡೆದುಕೊಂಡು ಹೋಗುವ ಭಕ್ತರು ಉಸಿರು ಬಿಗಿ ಹಿಡಿದುಕೊಂಡಿದ್ದಾರೆ. ಇದೀಗ ಬೋನಿನಲ್ಲಿ ಸಿಕ್ಕಿಬಿದ್ದಿರುವ ಚಿರತೆಯ ವಯಸ್ಸು ನಾಲ್ಕು ವರ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ ತಿರುಮಲ ನಡಿಗೆದಾರಿಯಲ್ಲಿ ಚಿರತೆ ದಾಳಿಗೆ ಮಗು ಲಕ್ಷಿತಾ ಮೃತಪಟ್ಟಿದ್ದು ಗೊತ್ತೇ ಇದೆ. ಈ ಘಟನೆಯಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಲರ್ಟ್ ಆಗಿದೆ. ತಿರುಮಲ ಪಾದಚಾರಿ ಮಾರ್ಗದಲ್ಲಿ ಭಕ್ತರ ಸುರಕ್ಷತೆಗೆ ಅಧಿಕಾರಿಗಳು ಒತ್ತು ನೀಡಿದ್ದಾರೆ.