ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಭಯ ಹುಟ್ಟಿಸಿದ್ದ ನಿಫಾ ವೈರಸ್ ಇದೀಗ ಪಶ್ಚಿಮ ಬಂಗಾಳಕ್ಕೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ಏಕೆಂದರೆ ಹೊಟ್ಟೆಹೊರೆಯಲು ಕೇರಳಕ್ಕೆ ಹೋಗಿ ವಾಪಸ್ ಪಶ್ಚಿಮ ಬಂಗಾಳಕ್ಕೆ ಮರಳಿದ ಯುವಕನಲ್ಲಿ ನಿಫಾ ವೈರಸ್ಗೆ ಸಂಬಂಧಿಸಿದ ಕೆಲವು ಲಕ್ಷಣಗಳು ಬಹಿರಂಗವಾಗಿವೆ. ಸದ್ಯ ಈ ಘಟನೆ ಪಶ್ಚಿಮ ಬಂಗಾಳದಲ್ಲಿ ಸಂಚಲನ ಮೂಡಿಸಿದೆ.
ಬುರ್ದ್ವಾನ್ ಜಿಲ್ಲೆಯ 20 ವರ್ಷದ ಯುವಕನೊಬ್ಬ ಕೆಲಸಕ್ಕಾಗಿ ಕೇರಳಕ್ಕೆ ವಲಸೆ ಹೋಗಿದ್ದ. ಆದರೆ ಅಲ್ಲಿದ್ದಾಗ ಅವರ ಆರೋಗ್ಯ ಕೆಟ್ಟಿತು. ತೀವ್ರ ಜ್ವರದಿಂದ ಬಳಲಿದ್ದು ಕೇರಳದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜ್ವರ ಕಡಿಮೆಯಾದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ. ಅಲ್ಲಿಂದ ನೇರವಾಗಿ ಪಶ್ಚಿಮ ಬಂಗಾಳ ತಲುಪಿದ ಬಳಿಕ ಎರಡೇ ದಿನಗಳಲ್ಲಿ ಮತ್ತೆ ಅಸ್ವಸ್ಥರಾದರು.
ತೀವ್ರ ಜ್ವರ, ವಾಕರಿಕೆ ಮತ್ತು ಗಂಟಲಿನ ಸೋಂಕಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವೆಲ್ಲವೂ ನಿಫಾ ವೈರಸ್ನ ಲಕ್ಷಣಗಳಾಗಿದ್ದು, ವೈದ್ಯರು ಅವರಿಗೆ ನಿಫಾ ವೈರಸ್ ಪರೀಕ್ಷೆಗಳನ್ನು ನಡೆಸಿದ್ದಾರೆ. ಇನ್ನೂ ವರದಿ ಬರದ ಕಾರಣ ಯುವಕನನ್ನು ಬೆಲಿಯಾಘಟ್ಟ ಐಡಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ನಿಫಾ ಪ್ರಕರಣಗಳು ಹೆಚ್ಚಿರುವ ಕೇರಳದಿಂದ ಬಂದ ಯುವಕರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ.