Wednesday, December 24, 2025

ನಶೆಯಲ್ಲಿ ಆಶಸ್ ಸೋತ್ರಾ ಆಂಗ್ಲರು? ECBಯಿಂದ ತನಿಖೆ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ವಿರುದ್ಧದ ಆಶಸ್ ಟೆಸ್ಟ್ ಸರಣಿಯಲ್ಲಿ ಮತ್ತೊಂದು ಸೋಲಿನೊಂದಿಗೆ ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಮೂರನೇ ಟೆಸ್ಟ್‌ನಲ್ಲಿ 82 ರನ್‌ಗಳ ಸೋಲು ಕಂಡ ಇಂಗ್ಲೆಂಡ್ ಸರಣಿಯನ್ನೇ ಕಳೆದುಕೊಂಡಿದ್ದು, ಇದೀಗ ತಂಡದ ಶಿಸ್ತು ವಿಚಾರವೂ ಚರ್ಚೆಗೆ ಬಂದಿದೆ. ವಿರಾಮದ ಅವಧಿಯಲ್ಲಿ ಆಟಗಾರರು ಅತಿಯಾದ ಮದ್ಯ ಸೇವಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತನಿಖೆ ನಡೆಸಲು ಮುಂದಾಗಿದೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆ ಎರಡನೇ ಮತ್ತು ಮೂರನೇ ಟೆಸ್ಟ್ ನಡುವಿನ ವಿರಾಮದಲ್ಲಿ ಇಂಗ್ಲೆಂಡ್ ತಂಡ ಬ್ರಿಸ್ಬೇನ್ ಸಮೀಪದ ನೂಸಾ ರೆಸಾರ್ಟ್‌ನಲ್ಲಿ ಉಳಿದುಕೊಂಡಿತ್ತು. ಈ ಸಮಯದಲ್ಲಿ ನಾಯಕ ಬೆನ್ ಸ್ಟೋಕ್ಸ್ ಸೇರಿ ಕೆಲ ಆಟಗಾರರು ಮದ್ಯಪಾನ ಮಾಡಿದ್ದಾರೆಯೆಂಬ ವರದಿಗಳು ಪ್ರಕಟವಾಗಿವೆ. ಇದಕ್ಕೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ಪುರುಷರ ತಂಡದ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ, ಆರೋಪಗಳು ಸತ್ಯವಾಗಿದ್ದರೆ ಪರಿಶೀಲನೆ ಅನಿವಾರ್ಯ ಎಂದು ಹೇಳಿದ್ದಾರೆ.

ಆಟಗಾರರು ಮಿತಿಯಲ್ಲಿ ಮದ್ಯ ಸೇವಿಸುವುದಕ್ಕೆ ತಾನು ವಿರೋಧಿಸುವುದಿಲ್ಲ, ಆದರೆ ಅದು ಮಿತಿ ಮೀರಿದರೆ ಸ್ವೀಕಾರಾರ್ಹವಲ್ಲ ಎಂದು ರಾಬ್ ಕೀ ಸ್ಪಷ್ಟಪಡಿಸಿದ್ದಾರೆ. ಇತ್ತ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಪ್ರದರ್ಶನವೂ ನಿರಾಶೆ ಮೂಡಿಸಿದ್ದು, ಮೂರು ಟೆಸ್ಟ್‌ಗಳಲ್ಲೂ ಸೋಲು ಕಂಡಿದೆ.

error: Content is protected !!