ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಾಲದ ‘ಗಾರ್ಡನ್ ಸಿಟಿ’ ಇಂದು ಧೂಳಿನ ನಗರಿಯಾಗಿ ಮಾರ್ಪಡುತ್ತಿದೆ. ಕಳೆದ ಐದು ವರ್ಷಗಳಿಂದ ಬೆಂಗಳೂರಿನ ವಾಯು ಗುಣಮಟ್ಟ ಸತತವಾಗಿ ಕುಸಿಯುತ್ತಿದ್ದು, ಇಂದು ನಗರದ ಸರಾಸರಿ AQI 170 ತಲುಪಿದೆ. ಇದು ಕೇವಲ ಅಂಕಿಅಂಶವಲ್ಲ, ಬೆಂಗಳೂರಿಗರ ಆರೋಗ್ಯದ ಮೇಲೆ ಬೀರುತ್ತಿರುವ ಗಂಭೀರ ಎಚ್ಚರಿಕೆಯ ಗಂಟೆಯಾಗಿದೆ.
ಇಂದಿನ ವರದಿಯ ಪ್ರಕಾರ, ನಗರದ ಗಾಳಿಯಲ್ಲಿ ಅತಿ ಸೂಕ್ಷ್ಮ ಕಣಗಳಾದ PM2.5 ಪ್ರಮಾಣ 82 µg/m³ ಮತ್ತು PM10 ಪ್ರಮಾಣ 119 µg/m³ ದಾಖಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿ ಕೇವಲ 15 µg/m³ ಆಗಿದ್ದು, ಸದ್ಯದ ಪ್ರಮಾಣವು ಈ ಮಿತಿಗಿಂತ ಸುಮಾರು 4.2 ರಿಂದ 5 ಪಟ್ಟು ಹೆಚ್ಚಿದೆ. ಅಂದರೆ ನಾವು ಸೇವಿಸುವ ಪ್ರತಿ ಉಸಿರಿನಲ್ಲೂ ಅಪಾಯಕಾರಿ ಕಣಗಳು ದೇಹ ಸೇರುತ್ತಿವೆ.
ನಗರದಲ್ಲಿ ಅತಿಯಾಗಿ ಬೆಳೆಯುತ್ತಿರುವ ವಾಹನಗಳ ಸಂಖ್ಯೆಯೇ ಈ ಮಾಲಿನ್ಯಕ್ಕೆ ಮೂಲ ಕಾರಣ. ಸದ್ಯ ಬೆಂಗಳೂರಿನಲ್ಲಿ 1.2 ಕೋಟಿಗೂ ಹೆಚ್ಚು ವಾಹನಗಳಿದ್ದು, ನಗರದ ಒಟ್ಟು ಮಾಲಿನ್ಯಕ್ಕೆ ಇವುಗಳ ಕೊಡುಗೆ 42% ರಷ್ಟಿದೆ. ವಿಶೇಷವಾಗಿ ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿರುವುದು ಆತಂಕಕಾರಿ ಸಂಗತಿ.
ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ PM2.5 ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶ ಸೇರಿ, ಅಲ್ಲಿಂದ ರಕ್ತದೊಳಗೆ ಲಗ್ಗೆ ಇಡುತ್ತವೆ.
AQI ಮಟ್ಟ 150 ದಾಟಿದರೆ ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮಾತ್ರವಲ್ಲದೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರಿನ ಈ ಹದಗೆಡುತ್ತಿರುವ ವಾತಾವರಣದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅನಿವಾರ್ಯವಾಗಿದೆ.

