ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ದೇವರಕೊಂಡ ಅವರ ಮುಂಬರುವ ತೆಲುಗು ಸಿನಿಮಾ ರೌಡಿ ಜನಾರ್ದನ ಚಿತ್ರದ ಮೊದಲ ನೋಟ ಮತ್ತು ಶೀರ್ಷಿಕೆ ಘೋಷಣೆಯ ವೀಡಿಯೊ ಬಿಡುಗಡೆಯಾದ ಬೆನ್ನಲ್ಲೇ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ವಿಜಯ್‌ಗೆ ತಮ್ಮ ಬೆಂಬಲವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ರವಿ ಕಿರಣ್ ಕೋಲಾ ನಿರ್ದೇಶನದ ಈ ಚಿತ್ರದ ವೀಡಿಯೊವನ್ನು ವಿಜಯ್ ಹಂಚಿಕೊಂಡ ತಕ್ಷಣವೇ, ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಅದನ್ನು ಮರುಪೋಸ್ಟ್ ಮಾಡಿ ತಂಡದ ಕೆಲಸಕ್ಕೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು. “ನೀವು ರೌಡಿ ಫೆಲೋ! ಎಷ್ಟು ಸೈಕ್ ವಿಷಯ, ಏನು ದೃಶ್ಯಗಳು, ಏನು ಸಂಗೀತ… ಅದ್ಭುತ ವೈಬ್” ಎಂದು ಬರೆದು, ಕೀರ್ತಿ ಸುರೇಶ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ X ವೇದಿಕೆಯಲ್ಲೂ “ಲೆಟ್ಸ್ ಗೋ” ಎಂದು ವಿಜಯ್ ಅವರನ್ನು ಟ್ಯಾಗ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಚಿತ್ರದ ಮೊದಲ ನೋಟದಲ್ಲಿ ವಿಜಯ್ ದೇವರಕೊಂಡ ಶರ್ಟ್‌ಲೆಸ್, ರಕ್ತಸಿಕ್ತ ಮುಖ, ದಪ್ಪ ಮೀಸೆ ಮತ್ತು ಗುಂಗುರು ಕೂದಲಿನೊಂದಿಗೆ ಭಯಂಕರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಡಾರ್ಕ್ ಮತ್ತು ಆಕ್ಷನ್‌ಪ್ಯಾಕ್ಡ್ ಕಥಾಹಂದರವನ್ನು ಸೂಚಿಸುತ್ತದೆ. ಕಿಂಗ್‌ಡಮ್ ಚಿತ್ರದ ಯಶಸ್ಸಿನ ಬಳಿಕ ವಿಜಯ್‌ಗೆ ಇದು ಮತ್ತೊಂದು ಮಹತ್ವದ ಯೋಜನೆ ಎನ್ನಲಾಗುತ್ತಿದೆ.

