ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಾಯಿ ಪಲ್ಲವಿಗೆ (Sai Pallavi) ವಿವಾಹವಾಗಿದೆ ಎಂದು ಸುದ್ದಿಯೊಂದು ವೈರಲ್ ಆಗಿತ್ತು. ಅದಕ್ಕೆ ಕಾರಣ ಆ ಒಂದು ಚಿತ್ರ.
ಇದೀಗ ವೈರಲ್ ಆಗಿದ್ದ ಚಿತ್ರದ ಕುರಿತು ಸಾಯಿ ಪಲ್ಲವಿ ಪ್ರತಿಕ್ರಿಯಿಸಿದ್ದು, ಸಾಮಾನ್ಯವಾಗಿ, ನಾನು ವದಂತಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ನನಗೆ ಭಯವೂ ಇಲ್ಲ. ಆದರೆ ಆ ಸುದ್ದಿಗಳು ನನ್ನ ಕುಟುಂಬವೇ ಆಗಿರುವ ಸ್ನೇಹಿತರನ್ನು ಒಳಗೊಂಡು ಅವರ ಮೇಲೆ ಪರಿಣಾಮ ಬೀರುತ್ತಿದೆ ಎಂದಾಗ ನಾನು ಮಾತನಾಡಲೇ ಬೇಕಾಗಿದೆ. ನನ್ನ ಸಿನಿಮಾದ ಪೂಜಾ ಸಮಾರಂಭದ ಚಿತ್ರವನ್ನು ಉದ್ದೇಶಪೂರ್ವಕವಾಗಿ ಕ್ರಾಪ್ ಮಾಡಿ ವೈರಲ್ ಮಾಡಲಾಗುತ್ತಿದೆ. ಹಣ ಬಲದ ಮೂಲಕ ಅನಾಮಿಕ ಖಾತೆಗಳನ್ನು ಬಳಸಿ ಕೆಟ್ಟ ಉದ್ದೇಶದಿಂದ ಆ ಚಿತ್ರವನ್ನು ವೈರಲ್ ಮಾಡಲಾಗಿದೆ. ನನ್ನ ಕೆಲಸದ ಬಗ್ಗೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕಾದ ಸಮಯದಲ್ಲಿ, ಈ ರೀತಿಯ ಅನವಶ್ಯಕ ವಿಷಯಗಳ ಬಗ್ಗೆ ವಿವರಿಸುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಬೇಸರವಿದೆ. ಈ ರೀತಿಯ ಅಸ್ವಸ್ಥತೆಯನ್ನು ಉಂಟುಮಾಡುವುದು ಬಹಳ ಹೀನಾಯ ಎಂದಿದ್ದಾರೆ.
ವೈರಲ್ ಆಗಿರುವ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆಗೆ ಇರುವ ವ್ಯಕ್ತಿಯ ಹೆಸರು ರಾಜಕುಮಾರ ಪೆರಿಯಸ್ವಾಮಿ. ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ನಟಿಸುತ್ತಿರುವ ಹೊಸ ಸಿನಿಮಾವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ತೆಗೆದ ಚಿತ್ರವನ್ನು ಬೇರೆ ಅರ್ಥ ಬರುವ ರೀತಿ ಕ್ರಾಪ್ ಮಾಡಿ ವೈರಲ್ ಮಾಡಲಾಗಿದೆ.